ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ದೇವೇಗೌಡರ ರಣತಂತ್ರ

ಮೈಸೂರು, ಸೆ 6     ಬಿಜೆಪಿ ತೆಕ್ಕೆಗೆ ಜಾರುತ್ತಿರುವ ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಿ,  ಒಕ್ಕಲಿಗ ಮತಬ್ಯಾಂಕ್  ಮತ್ತಷ್ಟು ಗಟ್ಟಿಮಾಡಿಕೊಳ್ಳಲು ಜೆಡಿಎಸ್ ಪರಮೋಚ್ಛ ನಾಯಕ ಹೆಚ್ ಡಿ ದೇವೇಗೌಡ ರಣತಂತ್ರ ರೂಪಿಸಲು ಹೊರಟಿದ್ದಾರೆ ಹುಣಸೂರು  ಕ್ಷೇತ್ರವನ್ನು ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠರು, ಮೈಸೂರು ಭಾಗದ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಂಟ ಮಾಜಿ ಸಚಿವ  ಸಾ.ರಾ.ಮಹೇಶ್ ಗೆ ಈ ಭಾಗದ ಪಕ್ಷ ಸಂಘಟನೆಗೆ ಸೂಚಿಸಲಾಗಿದೆ.  ಮುಂದಿನ ವಾರ ಎರಡು ದಿನಗಳ ಕಾಲ ಹೆಚ್.ಡಿ.ಕುಮಾರಸ್ವಾಮಿ ಮೈಸೂರು ಜಿಲ್ಲೆಯಲ್ಲಿ ಸಭೆ ನಡೆಸಲಿದ್ದು, ಪೂರ್ವಭಾವಿಯಾಗಿ ಸಾ.ರಾ.ಮಹೇಶ್ ಜಿಲ್ಲೆಗಳಲ್ಲಿ ನಗರ ಪಾಲಿಕೆ ಸದಸ್ಯರು ಹಾಗೂ ಗ್ರಾಮದ ಮುಖಂಡರ ಜೊತೆ ಬ್ಲಾಕ್ , ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಸಂಬಂಧ ಚರ್ಚೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಾ.ರಾ ನಡುವಿನ ಶೀತಲ ಸಮರ ಮುಂದುವರೆದಿದ್ದು, ಇದು ಪಕ್ಷದ ಭವಿಷ್ಯಕ್ಕೆ ಪ್ರತಿಕೂಲವಾಗಿ ಪರಿಣಮಿಸುವ ಸಾಧ್ಯತೆ ಇದೆ. ಜಿಟಿಡಿ ಬಿಜೆಪಿಗೆ ತೆಕ್ಕೆಗೆ ಜಾರುತ್ತಿರುವುದರಿಂದ ಹಾಗೂ ಹೆಚ್.ವಿಶ್ವನಾಥ್ ಈಗಾಗಲೇ ಬಿಜೆಪಿ ಜೊತೆ ಸಖ್ಯ ಬೆಳೆಸಿರುವುದರಿಂದ ಹುಣಸೂರಿನಲ್ಲಿ ಜೆಡಿಎಸ್ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮತಗಳು ಜಾರಿಹೋಗದಂತೆ  ಕಟ್ಟುನಿಟ್ಟಾಗಿ ಪಕ್ಷ ಸಂಘಟಿಸುವಂತೆ ಸಾ.ರಾ.ಮಹೇಶ್ ಗೆ ಸೂಚನೆ ನೀಡಲಾಗಿದೆ.  ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಹುಣಸೂರಿನಲ್ಲಿ ಪಕ್ಷದ ಕಾರ್ಯಕರ್ತರು ಇನ್ನೂ ಗಟ್ಟಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎನ್ನುವುದನ್ನು ಕ್ಷೇತ್ರದ ಜನರು ತೀರ್ಮಾನಿಸಲಿದ್ದಾರೆ ಎನ್ನುವ ಮೂಲಕ ಹುಣಸೂರಿನಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಎಂಬ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಜನತಾದಳದಲ್ಲಿ ಯಾರಿಗೇ ಬೇಸರವಾದರೂ ಅವರು ಮುಕ್ತವಾಗಿ ಮಾತನಾಡಲು ಅವಕಾಶ ಇದೆ. ಬೇಸರವನ್ನು ಮಾಧ್ಯಮಗಳ ಮುಂದೆಯೂ, ಕಾರ್ಯಕರ್ತರ ಸಭೆಗಳಲ್ಲಿಯೂ ಹೇಳಬಹುದು. ಯಾರೂ ಏನೇ ಅಂದರೂ ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲವನ್ನು ಮರೆತು ಅವರನ್ನು ಕ್ಷಮಿಸಿ ಮತ್ತೆ ಪಕ್ಷದಲ್ಲಿಯೇ ಉಳಿಸಿಕೊಳ್ಳುತ್ತಾರೆ. ಜಿ.ಟಿ.ದೇವೇಗೌಡ ಇನ್ನೂ ಜೆಡಿಎಸ್ ನಲ್ಲಿಯೇ ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಮುಕ್ತವಾಗಿ ಮಾತನಾಡುವವರಿಗೆ ಪಕ್ಷದಲ್ಲಿ ಅವಕಾಶವಿದೆ. ರಾಜಕೀಯ ಪಕ್ಷ ಎಂದ ಮೇಲೆ ನೋವು, ಸಂತೋಷ ಎರಡೂ ಇರುವುದು ಸಹಜ. ಜಿಟಿಡಿ ಅವರಿಗೆ ಯಾವ ರೀತಿಯಲ್ಲಿ ನೋವಾಗಿದೆ ಎಂಬುದು ತಮಗೆ ಗೊತ್ತಿಲ್ಲ. ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಎಂದು ಕರೆದು ತಮ್ಮನ್ನು ಎತ್ತರದ ಸ್ಥಾನ ನೀಡಿರುವುದಕ್ಕಾಗಿ  ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಬ್ಬ ಹಿರಿಯ ನಾಯಕರು ಈ ರೀತಿ ತಮ್ಮ ಬಗ್ಗೆ ಹೇಳಿದ್ದಕ್ಕೆ ಖುಷಿಪಡುತ್ತೇನೆ ಎಂದರು. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಅವರು ಪುತ್ರನಿಗೆ ಟಿಕೆಟ್ ಕೇಳಿದ್ದರು. ಆದರೆ ಚುನಾವಣೆಗೆ ಒಂದು ತಿಂಗಳು ಬಾಕಿ ಇದೆ ಎನ್ನುವಾಗ ಎಲ್ಲಿಂದಲೋ ಬಂದ ಹಿರಿಯರೊಬ್ಬರು ಬಿ ಫಾರಂ ಪಡೆದು, ಪಕ್ಷದಿಂದ ಗೆದ್ದು ಬಳಿಕ ಏನು ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಜಿಟಿಡಿ ಪುತ್ರನಿಗೆ ಟಿಕೆಟ್ ಕೊಡಲು ಹೆಚ್.ಡಿ.ದೇವೇಗೌಡ ಒಪ್ಪಿದ್ದಾರೆ ಎನ್ನುವ ಮೂಲಕ ಜಿ.ಟಿ.ದೇವೇಗೌಡರ ಕೋಪ, ಅಸಮಾಧಾನ ನಿವಾರಿಸುವ ಪ್ರಯತ್ನ ಮಾಡಿದರು.