ಮೊಬೈಲ್ ಸುಲಿಗೆ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನ

ಬೆಂಗಳೂರು,  ನ.14 :     ಮೊಬೈಲ್ ಸುಲಿಗೆ ಹಾಗೂ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಜಾಲಪತ್ತೆ ಹಚ್ಚಿರುವ ಅಶೋಕನಗರ ಪೊಲೀಸರು, ನಾಲ್ವರು ಅರೋಪಿಗಳನ್ನು ಬಂಧಿಸಿ, 40 ಲಕ್ಷ  ರೂ. ಬೆಲೆಯ 317 ಮೊಬೈಲ್ ಫೋನ್ಗಳ ವಶಪಡಿಸಿಕೊಂಡಿದ್ದಾರೆ.

ಜೆ.ಜೆ. ಆರ್.  ನಗರದ ಕಾಸಿಪ್ ಖಾನ್(24), ಗೋರಿಪಾಳ್ಯದ ಮರ್ದಾನ್ ಪಾಷ(19), ಪಾದರಾಯನಪುರದ ಅಪ್ಪು ಅಲಿಯಾಸ್ ಸ್ವಾಮಿ(28), ಕಾಟನ್ಪೇಟೆಯ ಅಬ್ದುಲ್ ಹಮೀದ್(32)ಬಂಧಿತ ಆರೋಪಿಗಳು.

ಆರೋಪಿಗಳಿಂದ 40 ಲಕ್ಷ ಬೆಲೆ ಬಾಳುವ 317 ಮೊಬೈಲ್ ಫೋನ್ಗಳು ಕೃತ್ಯ ನಡೆಸಲು ಬಳಸುತ್ತಿದ್ದ ಕಳವು ಮಾಡಿದ್ದ  ಮೋಟಾರ್ ಸೈಕಲ್ನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಆರೋಪಿಗಳಲ್ಲಿ ಮೂವರು ನಗರದಲ್ಲಿ ಒಂಟಿಯಾಗಿ  ಓಡಾಡುವವರ ಮೊಬೈಲ್ ಸುಲಿಗೆ ಮಾಡುವ ಕೃತ್ಯ ನಡೆಸುತ್ತಿದ್ದರು. ಮಾತ್ರವಲ್ಲ ಜನಸಂದಣಿ ಇರುವ ಸ್ಥಳ, ಬಸ್  ನಿಲ್ದಾಣಗಳಲ್ಲಿ ಮೊಬೈಲ್ ಪೋನ್ಗಳನ್ನು ಕಳವು ಮಾಡುತ್ತಿದ್ದರು. 

ಸುಲಿಗೆ ಹಾಗೂ  ಕಳ್ಳತನ ಮಾಡಿದ ಮೊಬೈಲ್ಗಳನ್ನು ಮತ್ತೊಬ್ಬ ಆರೋಪಿ ಮೊಬೈಲ್ ಸರ್ವಿಸಿಂಗ್ ಕೆಲಸ  ಮಾಡುತ್ತಿದ್ದ ಅಬ್ದುಲ್ ಹಮೀದ್  ಎಂಬಾತನಿಗೆ ತಂದು ನೀಡುತ್ತಿದ್ದು, ಈತನು ಮೊಬೈಲ್ ಫೋನ್ಗಳನ್ನು  ಹೈದ್ರಾಬಾದ್, ಮುಂಬೈ ಮತ್ತು ಕೇರಳ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ. ಕಳವು  ಮಾಲು ಸ್ವೀಕರಿಸುವವರು ಅವುಗಳನ್ನು ಮೂರ್ನಾಲ್ಕು ತಿಂಗಳ ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿರುವ  ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಹಲವು ಮೊಬೈಲ್ ಸುಲಿಗೆ ಮತ್ತು ಕಳವು ಪ್ರಕರಣಗಳು ದಾಖಲಾಗಿದ್ದು ವಶಕ್ಕೆ ಪಡೆದುಕೊಂಡಿರುವ ಮೊಬೈಲ್ಗಳಿಂದ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಹಾಗೂ ಈ ವ್ಯವಸ್ಥಿತ ಜಾಲದಲ್ಲಿ ಭಾಗಿಯಾಗಿರುವ ಹೆಚ್ಚಿನ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.