ಬೆಂಗಳೂರು. ಏ. 17,ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ನಿಂದ ಬಾಧಿತರಾದವರಿಗೆ ಆಶ್ರಯತಾಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಯಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಭೇಟಿ ನೀಡಿ, ಆಶ್ರಯದಲ್ಲಿರುವವರೊಂದಿಗೆ ಸಮಾಲೋಚನೆ ನಡೆಸಿ, ಸ್ವತ: ತಮ್ಮ ಕೈಯಾರೆ ಊಟ ಬಡಿಸಿ, ಸರ್ಕಾರ ನಿಮ್ಮೊಂದಿಗಿದೆ ಯಾವುದೇ ಆತಂಕಕ್ಕೊಳಗಾಗಬಾರದು ಎಂದು ಧೈರ್ಯ ತುಂಬಿದರು. ಮಿಜೋರಾಂ, ಈಶಾನ್ಯ ರಾಜ್ಯಗಳು, ಅಂತರ್ ರಾಜ್ಯಗಳಿಂದ ಆಗಮಿಸಿ ಲಾಕ್ ಡೌನ್ ನಿಂದ ಬಾದಿತರಾಗಿರುವವರಿಗೆ ಆಶ್ರಯ ನೀಡಲಾಗಿರುವ ಜಯನಗರದ ಮಾರೇನಹಳ್ಳಿಯಲ್ಲಿರುವ ವಿದ್ಯಾರ್ಥಿನಿಲಯ ಹಾಗೂ ಬಾದಿತರಾಗಿರುವವರಿಗೆ ಆಶ್ರಯವಾಗಿರುವ ಎಂ.ಜಿ. ರಸ್ತೆಯಲ್ಲಿರುವ ವಸತಿ ನಿಯಯಕ್ಕೆ ಇಂದು ಭೇಟಿ ನೀಡಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳು, ಊಟೋಪಚಾರ, ಆರೈಕೆ, ಆರೋಗ್ಯ ತಪಾಸಣೆ, ಸ್ವಚ್ಚತೆ, ಸಿಬ್ಬಂದಿವರ್ಗದ ನಡವಳಿಕೆಯ ಬಗ್ಗೆ ವಿಚಾಸಿದರು. ಮಾಸ್ಕ್, ಪೇಸ್ಟ್, ಸಾಬೂನು, ಕರವಸ್ತ್ರ, ಟವೆಲ್, ಉಡುಪು, ಔಷಧೋಪಚಾರಗಳ ಗುಣಮಟ್ಟವನ್ನು ಪರಿಶೀಲಿಸಿ, ವಿತರಿಸಿದರು.
ಈ ನಿರಾಶ್ರಿತರಿಗೆ ನೀಡಿರುವ ವಸತಿ ಕೊಠಡಿಗೆ ಭೇಟಿ ನೀಡಿ, ಬೆಡ್, ಬೆಡ್ ಶೀಟ್, ಉಡುಪು, ಸ್ವಚ್ಚತೆಯನ್ನು ಪರಿಶೀಲಿಸಿದರು. ನಂತರ ಅಡುಗೆ ಮನೆಗೆ ಭೇಟಿ, ಸಾಮಗ್ರಿಗಳನ್ನು ಪರಿಶೀಲಿಸಿದರು.
ಅಡುಗೆ ತಯಾರಕರೊಂದಿಗೂ ಚರ್ಚಿಸಿ, ಶುದ್ಧ ಮತ್ತು ಗುಣಮಟ್ಟದ ಊಟವನ್ನು ನೀಡುವಂತೆ ಸೂಚಿಸಿದರು. ಈ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಮಾಡಿಸಿ, ಔಷಧೋಪಚಾರ ಮಾಡಿಸಿದರು.
ಬೋಜನಾಲಯದಲ್ಲಿ ತಾವೇ ತಮ್ಮ ಕೈಯಿಂದಲೇ ಊಟ ಬಡಿಸಿ, ಯಾರೂ ಆತಂಕಕ್ಕೊಳಗಾಗಬಾರದು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಿದ್ಯಾರ್ಥಿ ನಿಲಯಗಳಲ್ಲೇ ವಾಸವಿರಬೇಕು. ಸಾಮಾಜಿಕ ಅಂತರ ಪಾಲಿಸಬೇಕು ಎಂದು ತಿಳಿಸಿದರು. ಆಶ್ರಯದಲ್ಲಿರುವವರು ಇಲಾಖೆಯು ನೀಡುತ್ತಿರುವ ಸೌಲಭ್ಯಗಳನ್ನು ಉತ್ತಮ ಹಾಗೂ ಗುಣಮಟ್ಟದಿಂದ ಕೂಡಿವೆ. ಇದರಿಂದ ತಮಗೆ ಸಾಕಷ್ಟು ಅನುಕೂಲವಾಗಿದೆ. ಯಾವುದೇ ತೊಂದರೆ ಇಲ್ಲ. ಸಕಾಲದಲ್ಲಿ ಆಹಾರ, ಆರೈಕೆ ದೊರಕುತ್ತಿದೆ. ಇಲಾಖೆಯ ಸಿಬ್ಬಂದಿ ವರ್ಗದ ಸಹಕಾರ ಉತ್ತಮವಾಗಿ ದೊರಕುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಲಹೆಗಾರ ಇ. ವೆಂಕಟಯ್ಯ, ಆಯುಕ್ತ ಪೆದ್ದಪ್ಪಯ್ಯ, ಉಪಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ ಉಪಸ್ಥಿತರಿದ್ದರು.