ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಭೇಟಿ: ಪರೀಶೀಲನೆ
Deputy Divisional Officer Gurunath Dadde visits Coodagi Thermal Power Plant: Inspection
ಕೊಲ್ಹಾರ 01: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ (ಎನ್ಟಿಪಿಸಿ) ವ್ಯಾಪ್ತಿಯ ಕೃತಕ ಹಾರು ಬೂದಿ ಕೆರೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ರೈತ ಸಂಘ ಹಾಗೂ ಸ್ಥಳೀಯ ರೈತರು ಬಹುದಿನಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ರೈತ ಸಂಘದ ಮುಖಂಡರಾದ ಸೋಮು ಬಿರಾದಾರ ಹಾಗೂ ರಮೇಶ ಬೀಳಗಿ ಮಾತನಾಡಿ, ಹಾರು ಬೂದಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು. ಮೊದಲು ಕೆರೆಯಲ್ಲಿ ನೀರು ತುಂಬಿಸಿ ಬೋಟ್‌ಗಳ ಮೂಲಕ ಬೂದಿಯನ್ನು ಟ್ಯಾಂಕರ್‌ಗಳಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಇದೀಗ ನೀರು ಹರಿಸದೇ ಒಣ ಬೂದಿಯನ್ನು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ತೆರೆದ ಟಿಪ್ಪರ್ ಹಾಗೂ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ ಎಂದು ದೂರಿದರು.
ಇದರಿಂದ ರಾಸಾಯನಿಕ ಮಿಶ್ರಿತ ಬೂದಿ ಧೂಳು ಗಾಳಿಯಲ್ಲಿ ಹರಡಿ ಸುತ್ತಮುತ್ತಲಿನ ಗ್ರಾಮಗಳಿಗೆ ವ್ಯಾಪಿಸುತ್ತಿದ್ದು, ಕುಡಿಯುವ ನೀರು ಮತ್ತು ಆಹಾರ ಮಾಲಿನ್ಯಗೊಂಡು ಜನಜಾನುವಾರುಗಳಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು. ರೈತರ ಫಲವತ್ತಾದ ಕೃಷಿಭೂಮಿಯೂ ಹಾನಿಗೊಳಗಾಗಿ ಬೆಳೆಗಳ ಮೇಲೆ ಬೂದಿ ಆವರಿಸಿರುವುದರಿಂದ ನಷ್ಟ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 200-300 ಎಕರೆ ಪ್ರದೇಶದಲ್ಲಿರುವ ಕೃತಕ ಕೆರೆಗಳಿಗೆ ನೀರು ಹರಿಸಿ ಹಿಂದಿನಂತೆ ಬೋಟ್‌ಗಳ ಮೂಲಕವೇ ಬೂದಿ ತುಂಬಿ ಟ್ಯಾಂಕರ್ ಗಳಲ್ಲಿ ಬೂದಿ ಸಾಗಿಸಬೇಕು. ಕೆರೆಗಳ ಸುತ್ತ ತಂತಿಬೇಲಿ ನಿರ್ಮಿಸಬೇಕು. ಹಾರು ಬೂದಿ ನೀರು ಸುತ್ತಮುತ್ತ ಹರಡದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಎನ್ಟಿಪಿಸಿ ನೇಮಕಾತಿಗಳಲ್ಲಿ ಸ್ಥಳೀಯ ಸಂತ್ರಸ್ತರ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಎಸಿ ಗುರುನಾಥ ದಡ್ಡೆ ಅವರು ರೈತರು ಹಾಗೂ ಎನ್ಟಿಪಿಸಿ ಅಧಿಕಾರಿಗಳೊಂದಿಗೆ ಹಾರು ಬೂದಿ ಕೆರೆ ಪ್ರದೇಶ ಮತ್ತು ಸುತ್ತಲಿನ ಕೃಷಿಭೂಮಿಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ರೈತರ ಅಹವಾಲುಗಳನ್ನು ಆಲಿಸಿದ ಅವರು, ಹಾರು ಬೂದಿ ನಿಯಂತ್ರಣಕ್ಕೆ ಸಂಬಂಧಿಸಿದ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಬೇಡಿಕೆಗಳನ್ನು ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಶಶಿಕಾಂತ ಬಿರಾದಾರ, ಸುನಿಲ ಹಿರೇಮಠ, ಯಮನೂರು ಬಿಸ್ಟಗೊಂಡ, ಶ್ರೀಶೈಲ ಬಾಡಗಿ, ಸಂಗಣ್ಣ ಗೋಲಗೊಂಡ, ಮಂಜುನಾಥ ಅರಕೇರಿ, ರಾಜುಗೌಡ ಪಾಟೀಲ್, ರಾಜು ತಳವಾರ, ಗ್ಯಾನು ಪಾಟೀಲ ಸೇರಿದಂತೆ ಎನ್ಟಿಪಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 