ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ತಾಕೀತು ಪರಿಹಾರ ವಿತರಣೆಯಲ್ಲಿ ವಿಳಂಬ ಸಲ್ಲ
Deputy Commissioner Nagendra Prasad issues strict warning against delay in distribution of relief
ಲೋಕದರ್ಶನ ವರದಿ
ಬಳ್ಳಾರಿ 26: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪ ಹಾಗೂ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ವಿಳಂಬ ಧೋರಣೆ ಸಲ್ಲದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.
ಮುಂಬರುವ ಮುಂಗಾರು ಮಳೆ ಹಾಗೂ ಸಂಭವನೀಯ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಏರಿ್ಡಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಮಳೆಯಿಂದ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ಪ್ರವಾಹ ಭೀತಿಯಿರುವ ನದಿ ತೀರದ ಗ್ರಾಮಗಳ ಕಡೆಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಯಾವುದೇ ಅನಾಹುತ ಸಂಭವಿಸಿದರೂ ತಕ್ಷಣವೇ ಸ್ಪಂದಿಸಬೇಕು ಎಂದು ತಿಳಿಸಿದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 11 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅರ್ಹರಿಗೆ ಸಿಗಬೇಕಾದ ತುರ್ತು ಪರಿಹಾರ ಹಾಗೂ ಸರ್ಕಾರದ ಇತರೆ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು. ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಮರಣೋತ್ತರ ಪರೀಕ್ಷೆ (ಪಿಎಂ) ವರದಿ ಪಡೆಯುವಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳಿದ್ದು, ಜಾನುವಾರುಗಳು ಮೃತಪಟ್ಟ ದಿನವೇ ಪಿಎಂ ವರದಿ ಸಿದ್ಧವಾಗಬೇಕು. ವರದಿಗಾಗಿ ದಿನಗಟ್ಟಲೆ ಕಾಯಿಸುವುದು ಸರಿಯಲ್ಲ. ವರದಿ ಬಂದ ತಕ್ಷಣವೇ ಎಸಿ ಅವರಿಂದ ಅನುಮೋದನೆ ಪಡೆದು, ತಹಶೀಲ್ದಾರರು ವಿಳಂಬವಿಲ್ಲದೆ ಪರಿಹಾರದ ಹಣವನ್ನು ಪಾವತಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಸ್ಪಷ್ಟಪಡಿಸಿದರು.
*ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಸೂಚನೆ:*
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗದಂತೆ ತಡೆಯಲು ಜಿ.ಪಂ ಹಾಗೂ ಪೌರಾಡಳಿತ ಇಲಾಖೆಗಳು ಜಂಟಿಯಾಗಿ ಕಾರ್ಯಯೋಜನೆ ರೂಪಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ಬಾಡಿಗೆಗೆ ಪಡೆಯಲು ಖಾಸಗಿ ಕೊಳವೆಬಾವಿಗಳನ್ನು ಹಾಗೂ ಟ್ಯಾಂಕರ್ ಗಳನ್ನು ಗುರುತಿಸಿ ಕಾಯ್ದಿರಿಸಿಟ್ಟುಕೊಳ್ಳಬೇಕು. ಯಾವುದೇ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಆರ್‌ಒ (ಶುದ್ಧೀಕರಣ) ಪ್ಲಾಂಟ್‌ಗಳ ವಿದ್ಯುತ್ ಬಿಲ್ ಪಾವತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಗೊಂದಲಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಈಗಾಗಲೇ ನೂರಾರು ಆರ್‌ಒ ಪ್ಲಾಂಟ್‌ಗಳು ದುರಸ್ತಿಯಲ್ಲಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯವರು, ಇನ್ಮುಂದೆ ಯಾವುದೇ ಖಾಸಗಿ ಕಂಪನಿ ಅಥವಾ ಕೈಗಾರಿಕೆಗಳು ಸಿಎಸ್‌ಆರ್ ಅಡಿ ಹೊಸ ಆರ್‌ಒ ಪ್ಲಾಂಟ್‌ಗಳನ್ನು ಸ್ಥಾಪಿಸಬೇಕಾದರೆ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಸಿಡಿಲು ಮತ್ತು ಮಿಂಚು ಬರುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ನಿಲ್ಲಬಾರದು. ಸಿಡಿಲು ಬಡಿತದ ಮುನ್ನೆಚ್ಚರಿಕೆಗಳ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ತಲುಪಿಸಲು ಪ್ರತಿ ತಿಂಗಳು ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಳ್ಳುವ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸಬೇಕು. ಇದರೊಂದಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಧ್ವನಿವರ್ಧಕಗಳ (ಟಾಮ್ ಟಾಮ್) ಮೂಲಕ ಸಿಡಿಲಿನ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ಕಡ್ಡಾಯವಾಗಿ ಜಾಗೃತಿ ಮೂಡಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರ ಮತ್ತು ಗ್ರಾಮೀಣ ಭಾಗದ ರಾಜಕಾಲುವೆಗಳು, ಚರಂಡಿಗಳ ಹೂಳು ತೆಗೆಯಬೇಕು. ವಿದ್ಯುತ್ ಕಂಬಗಳು ಬಿದ್ದಲ್ಲಿ ನಿಗದಿತ ಕಾಲಾವಧಿಯೊಳಗೆ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು. ಮುಂಗಾರು ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು ಇದ್ದು, ಇದಕ್ಕಾಗಿ ಸಮುದಾಯಗಳಲ್ಲಿ ಹೆಚ್ಚಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಬ್ದುಲ್ ರೆಹಮಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಇಂದುಧರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಡಿಯೋ ಮೂಲಕ ತಹಶೀಲ್ದಾರರು ಭಾಗವಹಿಸಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 