ಧಾರವಾಡ ಮದಿಹಾಳ ಅಂಗನವಾಡಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಓ ಭುವನೇಶ ಪಾಟೀಲ ಭೇಟಿ

ಧಾರವಾಡ ಮದಿಹಾಳ ಅಂಗನವಾಡಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಓ ಭುವನೇಶ ಪಾಟೀಲ ಭೇಟಿ Deputy Commissioner Divya Prabhu, CEO Bhuvanesh Patil visit Madihal Anganwadi, Dharwad

ಧಾರವಾಡ 12: ಧಾರವಾಡ ಮದಿಹಾಳ ನಗರದ ಸಿದ್ಧಾರೊಡ ಕಾಲೋನಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು (ನ.12) ಮಧ್ಯಾಹ್ನ ದೀಡೀರ್ ಭೇಟಿ ನೀಡಿ, ಮಕ್ಕಳ ಹಾಜರಾತಿ, ದಾಖಲಾತಿ ಪರೀಶೀಲಿಸಿದರು. 

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕೇಂದ್ರಕ್ಕೆ ಆಗಮಿಸುತ್ತಿದ್ದಂತೆಯೇ ಪುಟ್ಟ ಮಕ್ಕಳು ಗುಲಾಬಿ ಹೂವನ್ನು ನೀಡಿ, ಆತ್ಮೀಯ ಸ್ವಾಗತ ಕೋರಿ ಅವರ ಮುಖದಲ್ಲಿ ನಗು ಮೂಡಿಸಿದರು. 

ಅಂಗನವಾಡಿಯಲ್ಲಿ ಒಟ್ಟು 37 ಜನ ಮಕ್ಕಳು ಹಾಜರಿದ್ದರು. ಹಾಗೂ ಅಂಗನವಾಡಿ ಶಿಕ್ಷಕಿಯರು ಮಕ್ಕಳಿಗೆ ಹಾಡು ಹಾಡಿಸಿ, ಹಾಡಿನೊಂದಿಗೆ ನೃತ್ಯವನ್ನು ಮಾಡಿಸಿದರು. ಅದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಸಹ ಮಕ್ಕಳೊಂದಿಗೆ ಹಾಡು ಹಾಡಿ ಆನಂದಿಸಿದರು. ಅದೇ ರೀತಿ ನೆಲದ ಮೇಲೆ ಕುಳಿತು ಪ್ರತಿ ಮಗುವಿನೊಂದಿಗೆ ಮಾತನಾಡಿ ಅವರ ಶಾಲೆ, ಮನೆ, ಆಟಗಳು ಮತ್ತು ಊಟದ ಬಗ್ಗೆ ವಿಚಾರಿಸಿದರು. ಮಕ್ಕಳ ಹಾಸ್ಯ, ನಗು, ಕುತೂಹಲ ಮತ್ತು ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು. 

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಕ್ಕಳಿಗೆ ಚಾಕ್ಲೇಟ್ ನೀಡಿ ಸಿಹಿ ತಿನಿಸಿ ಅವರ ದಿನವನ್ನು ಇನ್ನಷ್ಟು ಮಧುರಗೊಳಿಸಿದರು. ಅಲ್ಲದೆ, ಮಕ್ಕಳ ಆಹಾರ ಮತ್ತು ಆರೋಗ್ಯದ ಕಡೆ ಗಮನ ಹರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. 

ಅಂಗನವಾಡಿ ಕೇಂದ್ರದ ಕಾರ್ಯವೈಖರಿ, ಪೌಷ್ಠಿಕ ಆಹಾರ ವಿತರಣೆಯ ವಿಧಾನ, ಮಕ್ಕಳ  ಹಾಜರಾತಿ, ದಾಖಲೆಗಳು ಹಾಗೂ ಸ್ವಚ್ಛತೆ ಕುರಿತಂತೆ ಡಿಸಿ ಮತ್ತು ಸಿಇಓ ಅವರು ಸಮಗ್ರ ಪರೀಶೀಲನೆ ನಡೆಸಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ.ಎಚ್‌.ಎಚ್‌.ಕುಕನೂರ ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,622 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ 0 ದಿಂದ 6 ವರ್ಷದ ಮಕ್ಕಳು ಸೇರಿ ಒಟ್ಟು 1,22,298 ಫಲಾನುಭವಿಗಳು ದಾಖಲಾಗಿದ್ದಾರೆ. 

ಐಸಿಡಿಎಸ್ ಯೋಜನೆಯಲ್ಲಿ ಪೋಷಣ ಪ್ರ್ಯಾಕರ್ ಮೂಲಕ ಫಲಾನುಭವಿಗಳನ್ನು ದಾಖಲು ಮಾಡಿಕೊಂಡು ಇಲಾಖೆಯ ಸೇವೆಗಳನ್ನು ಒದಗಿಸಲಾಗುತ್ತಿದೆ.  ಅದಕ್ಕೆ ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್ ಅವಶ್ಯವಿದ್ದು ಧಾರವಾಡ ಜಿಲ್ಲೆಯ ಒಟ್ಟು 1,22,298 ಫಲಾನುಭವಿಗಳ ಪೈಕಿ 1,19,841 ಫಲಾನುಭವಿಗಳನ್ನು ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್‌ನಲ್ಲಿ ದಾಖಲಿಸಿ, ವಿವರ  ಅಳವಡಿಸಲಾಗಿದೆ. ಇನ್ನುಳಿದ 2,449 ಬಾಕಿ ಉಳಿದಿರುವ ಫಲಾನುಭವಿಗಳ ಪೈಕಿ, ಕೆಲವು ಆಧಾರ್ ಕಾರ್ಡ್‌ ಸಮಸ್ಯೆ, ಜನನ ಪ್ರಮಾಣ ಪತ್ರ ಇಲ್ಲದಿರುವುದು, ಆಧಾರ ತಿದ್ದುಪಡಿ ಕಾರಣಗಳಿಂದ ಬಾಕಿ ಉಳಿದಿವೆ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ, ನೀಡಿದರು. 

ಅಂಗನವಾಡಿ ಕೇಂದ್ರಕ್ಕೆ ಆಗಮಿಸೊದ್ದ, ಗೊಲ್ಲ, ದುರ್ಗಮುರಗಿ ಹಾಗೂ ಇತರ ಅಲೆಮಾರಿ ಸಮಯದಾಯಗಳ ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಮಾತನಾಡಿಸಿದ ಜಿಲ್ಲಾಧಿಕಾರಿಗಳು, ಅವರ ಮಕ್ಕಳ ಹಾಗೂ ಮಹಿಳಾ ಪಲಾನುಭವಿಗಳ ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್ ಮಾಡುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು. ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಡಿಸಿ, ಸಿಇಓ ಬಿಸಿಯೂಟ ಸೇವನೆ: ಸರ್ಕಾರದ ಪೌಷ್ಠಿಕ ಯೋಜನೆಗಳ ಪ್ರಾಯೋಗಿಕ ಅನುಷ್ಠಾನವನ್ನು ಗಮನಿಸಿದರು. ಅಂಗನವಾಡಿ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಸಿಇಓ ಭುವನೇಶ ಪಾಟೀಲ ಅವರು ಮಧ್ಯಾಹ್ನದ ಬಿಸಿಯೂಟದಲ್ಲಿ ಅನ್ನ, ಸಾರು, ಮೊಟ್ಟೆ ಹಾಗೂ ಬಾಳೆಹಣ್ಣುನ್ನು ಸೇವಿಸಿದರು. 

ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊಡುವ ಆಹಾರ ಸರಕಾರದ ನಿಯಮಾನುಸಾರ ಇರಬೇಕು. ಆಹಾರದ ತೂಕ ಮತ್ತು ಪೌಷ್ಟಿಕಾಂಶದಲ್ಲಿ ವ್ಯತ್ಯಾಸ ಆಗಬಾರದು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು, ಗರ್ಭಿಣಿಯರನ್ನು ತಾಯಿಯಂತೆ ಮಾತೃಹೃದಯದಿಂದ ಕಾಣಬೇಕು. ಸರಕಾರದ ಸೌಲಭ್ಯಗಳು ದುರಪಯೋಗ ಆಗದಂತೆ, ವ್ಯರ್ಥವಾಗದಂತೆ ಮುನ್ನೆಚ್ಚರಿಕೆವಹಿಸಿ, ಕೇಂದ್ರ ತಮ್ಮ ಸ್ವಂತ ಮನೆ ಎಂದು ಭಾವಿಸಿ, ಮುನ್ನಡೆಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಂಗನವಾಡಿ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುನೇಶ್ ಪಾಟೀಲ ಅವರು ಸಹ ಮಕ್ಕಳು ಹಾಗೂ ಸಿಬ್ಬಂದಿಯೊಂದಿಗೆ ಸಂಭಾಷಣೆ ನಡೆಸಿ, ಅಂಗನವಾಡಿಯ ಕೆಲಸದ ವಿಧಾನ ಹಾಗೂ ಮಕ್ಕಳ ಪೋಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರೀಶೀಲಿಸಿದರು. 

ಅಂಗನವಾಡಿಗೆ ದಾಖಲಾಗುವ ಪ್ರತಿ ಮಗುವೂ ಪೂರ್ಣ ಪೌಷ್ಠಿಕ ಆಹಾರ ಪಡೆದುಕೊಳ್ಳಬೇಕು ಮತ್ತು ಪ್ರತಿದಿನದ ಮಕ್ಕಳ ಹಾಜರಾತಿ ಖಚಿತವಾಗಿರಬೇಕು ಎಂದು ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳು ಮಕ್ಕಳ ಸಮಗ್ರ ಬೆಳವಣಿಗೆಯ ಮೊದಲ ಹಂತ. ಇಲ್ಲಿ ಮಕ್ಕಳಿಗೆ ನೀಡುವ ಆರೈಕೆ, ಶಿಕ್ಷಣ ಮತ್ತು ಪೌಷ್ಠಿಕ ಆಹಾರವೇ ಅವರ ಭವಿಷ್ಯದ ಬುನಾದಿ. ಪ್ರತಿ ಅಂಗನವಾಡಿ ಕೇಂದ್ರವು ಮಾದರಿಯಾಗಬೆಕು.  ಕೇಂದ್ರದ ಸಿಬ್ಬಂದಿಗಳು, ಮಕ್ಕಳ ಜೊತೆ ತಾಳ್ಮೆಯಿಂದ ವರ್ತಿಸಬೇಕು ಎಂದು ಹೇಳಿದರು. 

ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿಯವರ ಈ ಅನೀರೀಕ್ಷಿತ ಭೇಟಿಯಿಂದ ಖುಷಿ ಪಟ್ಟರು. ತುಂಬಾ ಉತ್ಸಾಹಗೊಂಡು ತಮ್ಮ ಕೇಂದ್ರದ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಯವರ ಸರಳತೆ, ಮಮತೆ ಹಾಗೂ ಮಕ್ಕಳ ಮೇಲೆ ತೋರಿದ ಪ್ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್‌.ಹೂಗಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ, ಹುಬ್ಬಳ್ಳಿ ಧಾರವಾಡ ಶಹರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತಾ ಪಾಟೀಲ, ವಲಯ ಸಹಾಯಕ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಹಿರಿಯ ಆರೋಗ್ಯ ನೀರೀಕ್ಷಕರಾದ ಶಾಂತಗೌಡ ಬಿರಾದಾರ, ಮೇಲ್ವಿಚಾರಕಿಯರಾದ ರೇಣುಕಾ ಅಸುಂಡಿ, ನೇತ್ರಾವತಿ ಎಚ್‌.ಎಸ್‌., ಅಂಗನವಾಡಿ ಕಾರ್ಯಕರ್ತೆಯರಾದ ರಾಜಮ್ಮ, ರೇಣುಕಾ ವಾಲ್ಮೀಕಿ, ರತ್ನವ್ವ ಶಿರನೂರ, ಅಂಗನವಾಡಿ ಸಹಾಯಕೀಯರಾದ ರತ್ನಾ ಕೋಟಿ ಹಾಗೂ ಮಕ್ಕಳ ಪಾಲಕರು, ಇತರರು ಉಪಸ್ಥಿತರಿದ್ದರು.