ಕೆಪಿಎಸ್‌ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ

ಕೆಪಿಎಸ್‌ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ Demanding that the KPSC be freed from corruption and justice be ensured for the deserving

ಲೋಕದರ್ಶನ ವರದಿ 

ಧಾರವಾಡ 06 : ಕೆಪಿಎಸ್‌ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ ಸಂಘಟನೆಗಳಿಂದ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ಕೆಪಿಎಸ್ ಸಿ ಕರ್ಮಕಾಂಡಕ್ಕೆ ಕೊನೆ ಹಾಕಲು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ವೀರೇಶ್ ನರೇಗಲ್ ಮಾತನಾಡಿ, ಕೆಪಿಎಸ್‌ಸಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. 

ಲಕ್ಷಾಂತರ ಯುವಜನರ ಕನಸುಗಳಿಗೆ ಬೆಳಕಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ ಇಂದು ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಅಕ್ರಮಗಳಿಂದ ಪ್ರಶ್ನಾರ್ಹವಾಗಿದೆ. 1998ಹಿ99ರ ನೇಮಕಾತಿ ವಿವಾದಗಳಿಂದ ಆರಂಭವಾಗಿ, 2011ರ ಪರೀಕ್ಷಾ ಅಕ್ರಮಗಳು, 2014ರ ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ, 2019ರ ಅಂಕಗಳ ತಿರುಚುವಿಕೆಯ ಆರೋಪಗಳು, ಇತ್ತೀಚಿನ ವರ್ಷಗಳಲ್ಲಿ ಪಿಡಿಓ ನೇಮಕಾತಿಯಲ್ಲಿನ ಅಕ್ರಮಗಳು, ಕೆಎಎಸ್ ಪರೀಕ್ಷೆಯಲ್ಲಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ನಡೆದ ಲೋಪಗಳು ಹಾಗೂ ಅಕ್ರಮಗಳು,

ಕೆಪಿಎಸ್‌ಸಿ ಅಧ್ಯಕ್ಷರ ಸ್ವಜನ ಪಕ್ಷಪಾತ, ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಅವ್ಯವಹಾರ ಸೇರಿದಂತೆ ಪ್ರತಿಯೊಂದು ಪರೀಕ್ಷೆಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳುಶ್ರಿಇವೆಲ್ಲವೂ ಉದ್ಯೋಗಾಕಾಂಕ್ಷಿಗಳ ನಂಬಿಕೆಯನ್ನು ಅಲುಗಾಡಿಸಿವೆ. ಪ್ರತಿ ಹಗರಣವೂ ಸಾವಿರಾರು ಯುವಜನರ ಶ್ರಮ, ಸಮಯ ಮತ್ತು ಭವಿಷ್ಯದ ಮೇಲೆ ಹೊಡೆತ ನೀಡಿದೆ. ಅರ್ಹತೆಗಿಂತ ಹಣ, ಪ್ರಭಾವ ಮತ್ತು ಲಂಚ ನೀಡಿದವರಿಗೆ ಉದ್ಯೋಗಾವಕಾಶ ಸಿಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಕೂಡಲೇ ಕೆಪಿಎಸ್‌ಸಿಯ ಸಮಗ್ರ ಸುಧಾರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.