ಸರ್ಕಾರದ ಕ್ರಮ ಅವೈಜ್ಞಾನಿಕ-ರೈತ ವಿರೋಧಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿ

ಸರ್ಕಾರದ ಕ್ರಮ ಅವೈಜ್ಞಾನಿಕ-ರೈತ ವಿರೋಧಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿ Demand to withdraw cattle grazing order

ಜಾನುವಾರು ಅರಣ್ಯರೋದನ ಆದೇಶ ವಾಪಸ್ ಗೆ ಆಗ್ರಹ 

ಬೀದರ್‌: ಅರಣ್ಯ ಪ್ರದೇಶದೊಳಗೆ ದನಕರು, ಕುರಿ, ಮೇಕೆ ಇನ್ನಿತರೆ ಸಾಕು ಪ್ರಾಣಿಗಳು ಮೇಯಿಸುವುದರ ಮೇಲೆ ನಿಬಂರ್ಧ ಹೇರುವ ಮೂಲಕ ರಾಜ್ಯ ಸರ್ಕಾರ ಬಡವರ, ಹಿಂದುಳಿದವರ, ದಲಿತರ, ಹೈನುಗಾರರ ಹಾಗೂ ರೈತರ  ಹೊಟ್ಟೆ ಮೇಲೆ ಮಣ್ಣು ಹಾಕುವ ಕೆಲಸ ಮಾಡಿದೆ. ಅವೈಜ್ಞಾನಿಕವಾದ ಈ ಆದೇಶ ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ. 

ಅರಣ್ಯ ಪ್ರದೇಶ ಹಾಗೂ ಅದರಲ್ಲಿನ ವನ್ಯಜೀವಿ ನಾಡಿನ ಬಹುಮೂಲ್ಯ ಸಂಪತ್ತು. ಅವುಗಳ ಸಂರಕ್ಷಣೆ, ಸಂವರ್ಧನೆ ತೀರ ಅಗತ್ಯವಾಗಿದೆ. ಹಾಗಂತ ತಲೆತಲಾಂತರಗಳಿಂದ ಅರಣ್ಯ ಭೂಮಿಯನ್ನೇ ಅವಲಂಬಿಸಿದ ಲಕ್ಷಾಂತರ ದನಕರು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳ ಜೀವ ಹಿಂಡುವ ಹಾಗೂ ಇವುಗಳನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿರುವ ಬಡಪಾಯಿ ಜನರ ಮೇಲೆ ಅನ್ಯಾಯ ಮಾಡುವುದು  ಸರ್ವಥಾ ಸಮರ್ಥನೀಯವಲ್ಲ. ಈ ಆದೇಶ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ. 

ಅರಣ್ಯ ಸಂರಕ್ಷಣೆ, ಸಂವರ್ಧನೆಗಾಗಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದೊಳಗೆ ಸಾಕುಪ್ರಾಣಿಗಳನ್ನು ಮೇಯಿಸಲು ನಿಬಂರ್ಧ ಹೇರುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ  ಸಚಿವ ಈಶ್ವರ ಖಂಡ್ರೆ ಅವರು ಜುಲೈ 22ರಂದು ಹೊರಡಿಸಿದ ಟಿಪ್ಪಣಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ವಾಸ್ತವ ಏನೆಂಬುದು ತಿಳಿಯದೇ ಹಾಗೂ ಪೂರ್ವಾಪರ ವಿಚಾರ ಮಾಡದೇ ಫರ್ಮಾನು ಹೊರಡಿಸಿದಂತಿದೆ. ಸರ್ಕಾರ ಏನೇ ನಿರ್ಧಾರ ಕೈಗೊಳ್ಳುವಾಗ ಎಲ್ಲರ ಹಿತ ಗಮನಿಸಬೇಕು. ಅರಣ್ಯ ರಕ್ಷಣೆಯ ನೆಪದಲ್ಲಿ ಲಕ್ಷಾಂತರ ಜನ-ಜಾನುವಾರುಗಳ ಬದುಕು ಮೂರಾಬಟ್ಟೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಬೀದರಿನಿಂದ ಹಿಡಿದು ಚಾಮರಾಜನಗರವರೆಗೆ ಲಕ್ಷಾಂತರ ರೈತರು ಭೂ ಹೀನರಿದ್ದಾರೆ. ಇವರು ತಮ್ಮ ದನಕರು, ಕುರಿ, ಮೇಕೆ ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸಲು  ಶತ-ಶತಮಾನಗಳಿಂದಲೂ ಅಕ್ಕ-ಪಕ್ಕದ ಅರಣ್ಯ ಪ್ರದೇಶ  ಸೇರಿದಂತೆ ಸರ್ಕಾರಿ ಕಂದಾಯ ಜಮೀನು, ಗೈರಾಣ ಭೂಮಿಯೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗೈರಾಣ, ಗೋಮಾಳ, ಕಂದಾಯ ಜಾಗ ಬಹುತೇಕ ಕಡೆ ಇಲ್ಲಕ್ಕೆ ಸಮಾನವಾಗಿದೆ. ಇಂತಹದರಲ್ಲಿ ಅರಣ್ಯ ಪ್ರದೇಶವೇ ಈ ಎಲ್ಲ ಜೀವ ಸಂಕುಲಗಳಿಗೆ ಏಕೈಕ ಆಸರೆಯಾಗಿದೆ. ಇದನ್ನು ನೆಚ್ಚಿಯೇ ಹೈನುಗಾರಿಕೆ ಸೇರಿ ವಿವಿಧ ಉಪ ಕಸುಬು ಮಾಡುತ್ತ ಅಸಂಖ್ಯಾತ ಬಡ  ಜನರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈಗ ಅರಣ್ಯ ಪ್ರದೇಶದೊಳಗೆ ಎಂಟ್ರಿ ಬೇಡ ಎಂದರೆ ಹೇಗೆ? ಇವರ ಗತಿ ಏನು? ಎಂದು ಡಾ. ಬೆಲ್ದಾಳೆ ಪ್ರಶ್ನಿಸಿದ್ದಾರೆ. 

ಸರ್ಕಾರದ ಈ ಆದೇಶ ಹಿಂದುಳಿದ ಬೀದರ್ ಜಿಲ್ಲೆಯ ಅನೇಕ ಬಡವರು, ರೈತರಲ್ಲೂ ತಲ್ಲಣ ಸೃಷ್ಟಿಸಿದೆ. ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಅರಣ್ಯ ಪ್ರದೇಶಗಳಿವೆ. ಸುತ್ತಲಿನ ಹತ್ತಾರು ಗ್ರಾಮಗಳ ಬಡವರ ಜನಾವಾರುಗಳು ಮೇಯಲು ಮುಖ್ಯವಾಗಿ ಈ ಅರಣ್ಯ ಪ್ರದೇಶಗಳೇ ಆಧಾರವಾಗಿವೆ. ಇದೀಗ ಇಲ್ಲಿ ಜಾನುವಾರುಗಳಿಗೆ ಪ್ರವೇಶ ನಿಬಂರ್ಧ ಹೇರಿದರೆ ಏನ್ಮಾಡೋದು ಎಂಬ ಚಿಂತೆ ಜನರಿಗೆ, ರೈತರಿಗೆ ಕಾಡುತ್ತಿದೆ. ಕೂಡಲೇ ಸರ್ಕಾರ ತನ್ನ ಆದೇಶ ಹಿಂಪಡೆಯದಿದ್ದರೆ ಪಕ್ಷವು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ. 

ಕುರಿಗಾಹಿಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಕುರಿಗಾಹಿಗಳಿಗೆ ಅಭಯ ನೀಡುವ ಮಾತನಾಡಿದ್ದಾರೆ. ಈಗ ದನಕರುಗಳ ಜೊತೆಗೆ ಕುರಿ, ಮೇಕೆಗಳಿಗೂ ಅರಣ್ಯದೊಳಗೆ ಎಂಟ್ರಿಗೆ ಬ್ಯಾನ್ ಮಾಡಿರುವುದು ಈ ಕಸುಬು ನಂಬಿದವರಿಗೆ ಆಘಾತ  ನೀಡಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆದು ಬಡವರಲ್ಲಿ ಮನೆ ಮಾಡಿದ ಆತಂಕ ನಿವಾರಿಸಬೇಕು. 

-ಡಾ.ಶೈಲೇಂದ್ರ ಬೆಲ್ದಾಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕರು   

ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಹಾಯಕ, ಸಂಯೋಜಕ ನಾಗೇಶ ಸಿದ್ದಾ.