ಕುಣಿಕೇರಿ ತಾಂಡಾದ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ಆಗ್ರಹ
Demand to issue title deeds to site-less residents of Kunikeri Thanda
ಕೊಪ್ಪಳ 28: ತಾಲೂಕಿನ ಕುಣಿಕೇರಿ ತಾಂಡಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಬಡ, ನಿರಾಶ್ರಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಶಾಶ್ವತ ನಿವೇಶನ, ಹಕ್ಕುಪತ್ರ ಮತ್ತು ಇ-ಖಾತಾ ನೀಡದಿರುವುದನ್ನು ಖಂಡಿಸಿ ‘ನಿವೇಶನ ರಹಿತ ಹೋರಾಟ ಸಮಿತಿ’ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲೆಮಾರಿ ಜನಾಂಗದ ಮುಖಂಡ ಹಾಗೂ ನಿವೇಶನ ರಹಿತ ಹೋರಾಟ ಸಮಿತಿ ಮುಖ್ಯಸ್ಥ ಸಂಜಯ ದಾಸ ಕೌಜಲಗಿ, ಅರ್ಹ ಫಲಾನುಭವಿಗಳಿಗೆ ಕೂಡಲೇ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕುಣಿಕೇರಿ ತಾಂಡಾ ವ್ಯಾಪ್ತಿಯ ಸರ್ವೆ ನಂ. 41/1ರಲ್ಲಿ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು, ವಿಧವೆಯರು, ವಿಕಲಚೇತನರು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನೂರಾರು ಕುಟುಂಬಗಳು ಸ್ವಂತ ಸೂರಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿವೆ. ಹಲವು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಮೂಲಸೌಕರ್ಯ ಹಾಗೂ ಸರ್ಕಾರದ ಅಧಿಕೃತ ದಾಖಲೆಗಳು ದೊರೆತಿಲ್ಲ ಎಂದು ಅವರು ಆರೋಪಿಸಿದರು.
2024ರ ಆಶ್ರಯ ಸಮಿತಿ ಸಭೆಯಲ್ಲಿ ಸುಮಾರು 400ರಿಂದ 500 ನಿರಾಶ್ರಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದರೂ, ಇದುವರೆಗೆ ಅಧಿಕೃತವಾಗಿ ಹಕ್ಕುಪತ್ರ ವಿತರಿಸಿಲ್ಲ. ಸರ್ವೆ ನಂ. 41/1 ಹಾಗೂ ನರೇಗಾ ಕಾಮಗಾರಿಗಳ ಮೂಲಕ ಗುರುತಿಸಲಾದ ನಿವೇಶನಗಳಲ್ಲಿ ಬಡವರಿಗೆ ಆಶ್ರಯ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮಿತಿ ಆರೋಪಿಸಿತು.
ಮುಖ್ಯ ಬೇಡಿಕೆಗಳು: ಕುಣಿಕೇರಿ ತಾಂಡಾ ವ್ಯಾಪ್ತಿಯ ಎಲ್ಲ ಅರ್ಹ ನಿವೇಶನ ರಹಿತರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು. ಗ್ರಾಮ ಪಂಚಾಯಿತಿ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಇ-ಖಾತಾ ಹಾಗೂ ಖಾತಾ ಸಂಖ್ಯೆ ನೀಡಬೇಕು. ಬಡ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಮಿತಿ ಆಗ್ರಹಿಸಿತು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಜಯ ದಾಸ ಕೌಜಲಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಗಾಳೆಪ್ಪ ಮಂಗೋಳಿ, ಖಾಸಿಂಸಾಬ್ ಸರ್ದಾರ್, ರೆಹಮಾನ್ ಅಲಿ ಮಂಗಳೂರು, ಭಾಗ್ಯಮ್ಮ, ಭೀಮಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ 