ಶಾಸಕ ಡಾ.ಅಜಯಸಿಂಗಗೆ ಸಚಿವ ಸ್ಥಾನ ನೀಡಲು ಒತ್ತಾಯ

ಶಾಸಕ ಡಾ.ಅಜಯಸಿಂಗಗೆ ಸಚಿವ ಸ್ಥಾನ ನೀಡಲು ಒತ್ತಾಯ  Demand to give ministerial position to MLA Dr. Ajayasinghe

ತಾಳಿಕೋಟಿ 13 : ಜೇವರ್ಗಿ ಮತಕ್ಷೇತ್ರದ ಶಾಸಕ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರರಾದ ಡಾ.ಅಜಯಸಿಂಗ್ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಲೇಬೇಕು ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ರಜಪೂತ ಸಮಾಜದ ಯುವ ಮುಖಂಡ ವಿಜಯಸಿಂಗ್ ಹಜೇರಿ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಸಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಜಪೂತ ಸಮಾಜದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 45 ವರ್ಷಗಳವರೆಗೆ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕೆ ಅಪಾರ ಕೊಡುಗೆಯನ್ನು ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರು ಕೊಟ್ಟಿದ್ದಾರೆ.  

ಇದೀಗ ಅವರ ಪುತ್ರರಾದ ಅಜಯಸಿಂಗ್ ಅವರು ಮೂರು ಅವಧಿಗೆ ಶಾಸಕರಾಗಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ಸಾಕಷ್ಟು ಕೆಲಸ ಮಾಡಿದ ಅನುಭವ ಹೊಂದಿದವರಾಗಿದ್ದಾರೆ ಅವರನ್ನು ಈ ಮೊದಲೇ ಸಚಿವ ಸ್ಥಾನ ನೀಡುವುದಾಗಿ ರಾಜ್ಯಮಟ್ಟದ ನಾಯಕರು ತಿಳಿಸಿದ್ದರೂ ಇಲ್ಲಿವರೆಗೆ ವಚನ ಪಾಲಿಸಲಿಲ್ಲ ಬರಲಿರುವ ಸಂಪುಟದ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡದೇ ಹೋದಲ್ಲಿ ರಾಜ್ಯಾದ್ಯಂತ ನಮ್ಮ ಸಮಾಜದ ವತಿಯಿಂದ ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸಮಾಜದ ಪ್ರಮುಖರಾದ ಭರತಸಿಂಗ್ ವಿಜಾಪುರ, ಸುರೇಶ ಹಜೇರಿ, ಗೋವಿಂದಸಿಂಗ್ ಮೂಲಿಮನಿ ಹಾಗೂ ನವೀನ್ ಗೌಡಗೇರಿ ಅವರು ಮಾತನಾಡಿ ರಜಪೂತ ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದೆ. ನಮಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ ಇದು ನಮ್ಮ ಹಕ್ಕಾಗಿದೆ ಅದನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ ಪಕ್ಷದ ವರಿಷ್ಠರು ಕೊಟ್ಟ ಭರವಸೆಯಂತೆ ನಡೆದುಕೊಂಡು ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.  

ಸುದ್ದಿಗೋಷ್ಠಿಯಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ,ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಗೋವಿಂದಸಿಂಗ್ ಗೌಡಗೇರಿ, ಬಾಬು ಹಜೇರಿ, ಜೈಸಿಂಗ್ ಮೂಲಿಮನಿ, ರಘುಸಿಂಗ್ ಹಜೇರಿ(ಶೇಠ), ಸುರೇಶಕುಮಾರ ಹಜೇರಿ, ರಮೇಶ ಗೌಡಗೇರಿ, ಪ್ರಹ್ಲಾದ್ ಹಜೇರಿ, ಸಂತೋಷ ಹಜೇರಿ(ಭವಾನಿ), ಭವನಸಿಂಗ್ ಹಜೇರಿ, ಸಂಜೀವಕುಮಾರ ಹಜೇರಿ, ಕೆಸರಸಿಂಗ್ ಹಜೇರಿ, ದೀಲೀಪಸಿಂಗ್ ಹಜೇರಿ, ಪ್ರದೀಪ ವಿಜಾಪುರ, ವಿಠಲಸಿಂಗ್ ಹಜೇರಿ, ಅರುಣ ದಡೇದ, ಸುನಿಲ್ ಬಿಜಾಪುರ, ಶಿವಾ ಗೌಡಗೇರಿ,ನಿಖಿಲ್ ಮೂಲಿಮನಿ, ವಿಶ್ವ ನಾಯಕ, ಗಂಗಾರಾಮ ಬಿಜಾಪುರ, ರಾಘು ಮೂಲಿಮನಿ, ರಾಘು ಕೋಟಿಮನಿ, ಬಬ್ಲು ಬಿಜಾಪುರ ಇದ್ದರು.