15ನೇ ಹಣಕಾಸು ಆಯೋಗದ ಅನುದಾನ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

15ನೇ ಹಣಕಾಸು ಆಯೋಗದ ಅನುದಾನ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ Demand to fulfill the 15th Finance Commission grants and other demands

ಲೋಕದರ್ಶನ ವರದಿ 

ಹಾವೇರಿ 05: ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ವೆಚ್ಚ ಬಿಡುಗಡೆಗೊಳಿಸಲು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಜಿಪಂ ಪ್ರಭಾರ ಯೋಜನಾ ನಿರ್ದೇಶಕರಾದ ಡಾ.ಪುನೀತ್‌.ಬಿ.ಆರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. 

2025-26ನೇ ಸಾಲಿಗೆ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾಗಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಇದುವರೆವಿಗೂ ಬಿಡುಗಡೆಯಾಗಿರುವುದಿಲ್ಲ. ಅದ್ದರಿಂದ ಕೂಡಲೇ ಕೇಂದ್ರ ಸರ್ಕಾರದಿಂದ ಸದರಿ ಅನುದಾನವನ್ನು ತರಿಸಿಕೊಂಡು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕು.ಉದ್ಯೋಗಖಾತ್ರಿ ಯೋಜನೆಯಲ್ಲಿ ಅನುಷ್ಠಾನ ಮಾಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿ ವೆಚ್ಚ, 2025 ಜನವರಿಯಿಂದ ಇದುವರೆವಿಗೂ ಬಿಡುಗಡೆಯಾಗಿರುವುದಿಲ್ಲ. ಆದ್ದರಿಂದ ಕೂಡಲೇ ಸಾಮಗ್ರಿ ವೆಚ್ಚ ಬಿಡುಗಡೆಗೆಗೊಳಿಸಬೇಕು.ಗ್ರಾಮ ಪಂಚಾಯತಿ ಹಂತದ ಗ್ರಂಥಾಲಯಗಳ( ಅರಿವು ಕೇಂದ್ರ) ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರದಿಂದ 12 ಸಾವಿರ ರೂಗಳು, ಗ್ರಾಮ ಪಂಚಾಯತಿಗಳು ಸಂಗ್ರಹಿಸುವ ಗ್ರಂಥಾಲಯ ಕರ ಹಾಗೂ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೀಗೆ ಮೂರು ಮೂಲಗಳಿಂದ ಹಣ ಸಂಗ್ರಹಿಸಿ ಮಾಸಿಕ ಕನಿಷ್ಠ ವೇತನ ನೀಡಲಾಗುತ್ತಿದೆ.ಇದರಿಂದಾಗಿ ಗ್ರಾಮ ಪಂಚಾಯತಿಗಳ ಮೇಲೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಗ್ರಂಥಾಲಯ ಮೇಲ್ವಿಚಾರಕರ ಮಾಸಿಕ ಕನಿಷ್ಠವೇತನವನ್ನು ಸಂಪೂರ್ಣವಾಗಿ ಭರಿಸಬೇಕು.ಗ್ರಾಮ ಪಂಚಾಯತಿಗಳ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಸಂಘಗಳ ಮಹಿಳೆಯರು,  ತ್ಯಾಜ್ಯ ಸಂಗ್ರಹಣೆ ಮತ್ತು ಮಾರಾಟದ ಮೂಲಕ ಮಾಸಿಕ ಗೌರವ ಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರುಗಳು ಗ್ರಾಮ ಪಂಚಾಯತಿಗಳನ್ನು ಅವರ ಮಾಸಿಕ ಗೌರವ ಧನಕ್ಕಾಗಿ ಒತ್ತಾಯಿಸುತ್ತಿದ್ದು, ಗಾಮ ಪಂಚಾಯತಿಗಳಿಗೆ ಅದು ಕಷ್ಠಸಾಧ್ಯವಾಗಿರುತ್ತದೆ. ಆದ್ದರಂದ ರಾಜ್ಯ ಸರ್ಕಾರವೇ ಅವರ ಮಾಸಿಕ ಗೌರವ ಧನ ಭರಿಸಬೇಕು.ಕೂಸಿನ ಮನೆ ಕಾರ್ಯಕರ್ತೆಯರಿಗೆ ಉದೋಗ ಖಾತ್ರಿ ಯೋಜನೆಯಿಂದ ಗೌರವ ಧನ ನೀಡಲು ಸಾಧ್ಯವಿಲ್ಲವೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಸ್ಟಷ್ಟಪಡಿಸಿದೆ. ಆದ್ದರಿಂದ ಅವರಿಗೂ ಸಹ ರಾಜ್ಯ ಸರ್ಕಾರವೇ ಮಾಸಿಕ ಗೌರವ ಧನ ನೀಡಬೇಕು.ಈ ಹಿಂದೆ ನಮ್ಮ ಮಹಾ ಒಕ್ಕೂಟವು 28 ಬೇಡಿಕೆಗಳನ್ನು ಸರ್ಕಾದ ಮುಂದಿಟ್ಟು ಹೋರಾಟ ಮಾಡಿತ್ತು ಅವುಗಳಲ್ಲಿ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸಿದ್ದು,ಇನ್ನಿತರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು.ಮೇಲಿನ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸಕಾರವು ಕೂಡಲೇ ಈಡೇರಿಸಲು ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. 

ಈ ಸಂದರ್ಭದಲ್ಲಿ ಕರಾಗ್ರಾಪಂ ಸದಸ್ಯರ ಮಹಾಒಕ್ಕೂಟ ಜಿಲ್ಲಾಧ್ಯಕ್ಷರಾದ ಆನಂತರಾಜ ಹವಳಣ್ಣನವರ,ರಾಜ್ಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ತಲ್ಲೂರ,ಮಹಾಒಕ್ಕೂಟದ ರಾಜ್ಯ ಮಾಧ್ಯಮ ಕಾರ್ಯದರ್ಶಿ ನಿಂಗಪ್ಪ ಆರೇರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತೇಶ ಈಳಗೇರ ಮುಖಂಡರಾದ ನಾಗರಾಜ ಪಾಟೀಲ,ವೀರೇಶ ಯಲವಿಗಿ ಸೇರಿದಂತೆ ಜಿಲ್ಲೆಯ ಗ್ರಾಪಂ ಜನಪ್ರತಿನಿಧಿಗಳು ಇದ್ದರು.