ಕೊನೆಯ ಭಾಗಕ್ಕೆ ನೀರು ತಲುಪುವಂತೆ ನೋಡಿಕೊಳ್ಳಲು ಆಗ್ರಹ

ಕೊನೆಯ ಭಾಗಕ್ಕೆ ನೀರು ತಲುಪುವಂತೆ ನೋಡಿಕೊಳ್ಳಲು ಆಗ್ರಹ Demand to ensure water reaches the tail-end areas

ವಿಜಯಪುರ 12: ಮುಳವಾಡ ಏತ ನೀರಾವರಿ ವ್ಯಾಪ್ತಿಗೆ ಬರುವ ಮಲಘಾಣ ಪಶ್ಚಿಮ ಕಾಲುವೆಯ ಕೊನೆಯ ಅಂಚಿನವರೆಗೆ ನೀರು ಹರಿಸಿ, ಜನ ಜಾನುವಾರುಗಳಿಗೆ ಹಾಗೂ ಕೃಷಿಗೆ ನೀರು ಹರಿಸಲು ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ನಡೆದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಬುಧವಾರ 2ನೇ ದಿನಕ್ಕೆ  ಪೂರೈಸಿ 3ನೇ ದಿನಕ್ಕೆ ಕಾಲಿಟ್ಟಿದೆ.  

2ನೇ ದಿನದ ಧರಣಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತ ಪರ ಎಂದು ಹೇಳುವ ಸರ್ಕಾರ ಹಿನ್ನೆಲೆಯಾಗಿ ರೈತ ವಿರೋಧಿ ಕೆಲಸ ಮಾಡುತ್ತ ರೈತರ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಿದೆ.

ರೈತರು ಕೃಷಿಗಾಗಿ ಜನ ಜಾನುವಾರುಗಳಿಗೆ ನೀರು ಕೇಳುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವುದು ಜನ ಪ್ರತಿನಿಧಿಗಳ ಕರ್ತವ್ಯ ಆದರೆ ತಮ್ಮ ಜವಾಬ್ದಾರಿ ಮರೆತು ಹೋರಾಟಕ್ಕೂ ನಮಗೂ ಸಂಬಂಧವಿಲ್ಲ ಎಂದು ವರ್ತಿಸುವುದು ಸರಿಯಲ್ಲ. 

2 ದಿನಗಳಿಂದ ಧರಣಿ ನಡೆಸುತ್ತಿದ್ದರೂ ರೈತರ ಬಳಿ ಆಗಮಿಸದೆ ಫಲಾಯನಗೈದಿರುವುದು ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ನೀತಿ ಎದ್ದುಕಾಣುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ.

ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮಲಘಾಣ ಪಶ್ಚಿಮ ಕಾಲುವೆ ನಿರ್ಮಾಣಗೊಂಡು 13 ವರ್ಷಕ್ಕೆ ಕಾಲಿಟ್ಟರೂ ಇಲ್ಲಿಯವರೆಗೂ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ ಎಂದರೆ ಏನರ್ಥ? ಎಂದು ಅರವಿರಿಂದ ಕುಲಕರ್ಣಿ ಅವರು ಸಚಿವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ. 

ಸಚಿವರು ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಯಾವ ರೀತಿಯಾಗಿ ಕಾಲುವೆಯ ಕೊನೆಯ ಅಂಚಿನವರಿಗೆ ನೀರು ತಲುಪಿಸುತ್ತಾರೆ ಏನೋ ನಮಗೆ ಗೊತ್ತಿಲ್ಲ. ರೈತರಿಗೆ ನಿರಂತರ 15 ರಿಂದ 20 ದಿನಗಳವರೆಗೆ ನೀರು ಹರಿಸಬೇಕು. ಪ್ರತಿವರ್ಷ ಹೋರಾಟ ಮಾಡಿಯೇ ನೀರು ಪಡೆದುಕೊಳ್ಳುವಂತಾಗಬಾರದು.

ಮಲಘಾಣ ಪಶ್ಚಿಮ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪಲು ಏನೇ ಅಡೆ-ತಡೆ ಇದ್ದರೂ ಅದನ್ನು ಸಂಬಂಧಿಸಿದ ಕೆಬಿಜೆಎನ್‌ಎಲ್ ಅಧಿಕಾರಿಗಳು ನಿಗಧಿತ ವೇಳೆಯಲ್ಲಿ ಸಮಸ್ಯೆ ಬಗೆ ಹರಿಸಬೇಕು. ಅಲ್ಲಿಯವರೆಗೂ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು. ಇಲ್ಲದಿದ್ದರೆ ಈ ಹೋರಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. 

2ನೇ ದಿನದ ಧರಣಿಯಲ್ಲಿ ರಮೇಶ ದೇಸಾಯಿ, ಹೂವಪ್ಪ ಹುಕ್ಕೇರಿ, ಪ್ರಭು ಬಸ್ತವಾಡ, ಸುರೇಶ ನಾವಲಗಿ, ಪ್ರೇಮಾನಂದ ದೇಸಾಯಿ, ಉಮಾಕಾಂತ ತಡಾಕೆ, ಶೇಖಪ್ಪ ದೇಸಾಯಿ, ರಂಗಪ್ಪ ದೇಸಾಯಿ, ಸಿದ್ರಾಯ ಜಂಗಮಶೆಟ್ಟಿ, ಲಕ್ಷ್ಮಣ ಕೊಗಟನೂರ, ರಮೇಶ ತಂಬಾಕೆ, ಈರ​‍್ಪ ಕೋಷ್ಠಿ, ಏಕನಾಥ ಕೊಕಟನೂರ, ಗಂಗಪ್ಪ ತೊಂಡಿಕಟ್ಟಿ, ಸಂಗಪ್ಪ ಅಂಬಲಿ, ಶೇಖರ ಅಂಬಲಿ, ಸಂಗಪ್ಪ ಮುಂಡಗನೂರ,

ರುದ್ರ​‍್ಪ ವಟವಟಿ, ಧರೆಪ್ಪ ತಿಕೋಟಿ, ಗುರ​‍್ಪ ನಾವಲಗಿ, ಭೂತಾಲ ಕುಚನೂರ, ಗೈಬುಸಾಬ ಕೌಜಲಗಿ, ದಾದಾಪೀರ ಮಾಚಕನೂರ, ಆನಂದ ಅಂಬಲಿ, ಮಾಂತೇಶ ಹುಕ್ಕೇರಿ, ನವೀನ ದೇಸಾಯಿ, ಶಿವಲಿಂಗಪ್ಪ ಹುಕ್ಕೇರಿ, ಸಚಿನ ಪಂಚಗಾವಿ, ಸಿದ್ರಾಯ ಸಾರವಾಡ, ಅಪ್ಪು ದೊಡಮನಿ, ರಾಜು ಪ್ರಧಾನಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬಬಲೇಶ್ವರ ತಾಲೂಕಾ ಘಟಕದ ಅಧ್ಯಕ್ಷರಾದ ಲಕ್ಷ್ಮೀ ಬಿರಾದಾರ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.