ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಗೆ ಆಗ್ರಹ

ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಗೆ ಆಗ್ರಹ  Demand to declare the district fully drought-hit


ತಾಳಿಕೋಟಿ: ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರಾಷ್ಟ್ರೀಯ ರೈತರ ಸಂಘ ಆಗ್ರಹಿಸಿದೆ. ಸೋಮವಾರ ಕಲಕೇರಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಳಿಕೋಟಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್ ಭೋವಿ, ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಸರಿಯಲ್ಲ. ಉಳಿದ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಹಣಮಂತ ವಡ್ಡರ್ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸದಿದ್ದರೆ ಸಾವಿರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಮಾತನಾಡಿ, ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸದಿದ್ದರೆ ಕಲಕೇರಿಯಿಂದ ವಿಜಯಪುರದವರೆಗೆ ರೈತರೊಂದಿಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಅಶೋಕ್ ಗೌಡ ಪಾಟೀಲ, ಸುರೇಶ್ ದೇಸಾಯಿ, ಅರವಿಂದ್ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.