ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹ

ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹ  Demand to declare Indi taluk as drought prone taluk


ಇಂಡಿ, ಸೆ. 3: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದ ಬಳಿ ಇಂಡಿ ಬಿಜೆಪಿ ರೈತ ಮೋರ್ಚಾ ಮಂಡಳಿಯ ವತಿಯಿಂದ ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.  

ಇಂಡಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಇಂಡಿ ಮತಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ, ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಮೊದಲ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿಯನ್ನು ಕೈಬಿಟ್ಟಿರುವುದನ್ನು ಖಂಡಿಸಿದರು.  

ತಕ್ಷಣವೇ ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕು. ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ?50 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.  

ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮೇವು ಬ್ಯಾಂಕ್ಗಳನ್ನು ತೆರೆಯಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.  

ಬೆಳೆ ವಿಮೆ ಮಧ್ಯಂತರ ಪರಿಹಾರಕ್ಕೆ ಅರ್ಹರಾಗಿರುವ ಹಾಗೂ ಬೆಳೆ ವಿಮೆ ಪಾವತಿಸಿರುವ ರೈತರಿಗೆ ಶೇ.50ರಷ್ಟು ಮಧ್ಯಂತರ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.  

ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಲಭ್ಯವಿರುವ ನೀರನ್ನು ತಾಲೂಕಿನ ಕಾಲುವೆ ಹಾಗೂ ಕೆರೆಗಳಿಗೆ ಹರಿಸಿ, ಜಲಮೂಲಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಇಂಡಿ ಬಿಜೆಪಿ ಮಂಡಳದ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಾಳು ಮುಳಜಿ, ಬಿಜೆಪಿ ಮುಖಂಡರಾದ ಶರಣು ಬಂಡಿ, ಈರಣ್ಣಗೌಡ ಪಾಟೀಲ, ಶ್ರೀಮಂತ ಜೇವೂರ, ರಾಮಸಿಂಗ್ ಕನೊಳ್ಳಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.