ಡಾ. ಕೆ.ಎಂ. ಸೈಯದ್ಗೆ ವಿಧಾನ ಪರಿಷತ್ ಸ್ಥಾನ ನೀಡಲು ಆಗ್ರಹ

ಡಾ. ಕೆ.ಎಂ. ಸೈಯದ್ಗೆ ವಿಧಾನ ಪರಿಷತ್ ಸ್ಥಾನ ನೀಡಲು ಆಗ್ರಹ  Demand to allot Legislative Council seat to Dr. K.M. Syed


ಕೊಪ್ಪಳ, ಸೆ. 9: ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ. ಕೆ.ಎಂ. ಸೈಯದ್ ಅವರನ್ನು ಮುಂಬರುವ ಕರ್ನಾಟಕ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಬೇಕು ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಲಾನ್ ಕಿಲ್ಲೇದಾರ್ ಅಲಿಯಾಸ್ ಮೈಲೈಕ್ ಜಿಲಾನ್ ಅವರು ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಯನ್ನು ಒತ್ತಾಯಿಸಿದ್ದಾರೆ.  

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ತಳಮಟ್ಟದಿಂದ ಪಕ್ಷ ಸಂಘಟನೆ ಹಾಗೂ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ಕೆ.ಎಂ. ಸೈಯದ್ ಅವರ ಸೇವೆ, ಅನುಭವ ಮತ್ತು ನಾಯಕತ್ವವನ್ನು ಪರಿಗಣಿಸಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.  

ಕೊಪ್ಪಳ ಜಿಲ್ಲೆಯಲ್ಲಿ ಜನಿಸಿ ಬೆಳೆದಿರುವ ಡಾ. ಕೆ.ಎಂ. ಸೈಯದ್ ಅವರು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್, ಉದ್ಯಮಿ, ಕೃಷಿಕ ಹಾಗೂ ಸಹಕಾರ ಕ್ಷೇತ್ರದ ಪ್ರಮುಖರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ವಿವಿಧ ಹೋರಾಟಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ.