ಸೇವೆದಿಂದ ಮುಖ್ಯಶಿಕ್ಷಕಿ ಅಮಾನತುಗೆ ಆಗ್ರಹ; ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ

ಸೇವೆದಿಂದ ಮುಖ್ಯಶಿಕ್ಷಕಿ ಅಮಾನತುಗೆ ಆಗ್ರಹ; ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ  Demand for suspension of headmistress; warning of intense protest if no action is taken

ಲೋಕದರ್ಶನ ವರದಿ 

ಕಂಪ್ಲಿ, ಜು.31: ತಾಲೂಕಿನ ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅರುಣಾ ಅವರ ವಿರುದ್ಧ ಹಲವು ಅಕ್ರಮಗಳು ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದ ಆರೋಪಗಳನ್ನು ಹೊರಿಸಿರುವ ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಶಾಲೆಯಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  

ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗುವಂತೆ ಆಡಳಿತ ನಡೆಯುತ್ತಿದೆ. ಸಹ ಶಿಕ್ಷಕರಿಗೆ ಕಿರುಕುಳ ನೀಡುವುದು, ಶಾಲಾ ಶುಲ್ಕದಲ್ಲಿ ಅವ್ಯವಹಾರ ನಡೆಸುವುದು, ಎಸ್‌ಎಸ್‌ಎಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ಆನ್ಲೈನ್ ಅರ್ಜಿಗಳ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿರುವ ಆರೋಪಗಳು ಕೇಳಿಬಂದಿವೆ ಎಂದು ಪ್ರತಿಭಟನಾಕಾರರು ದೂರಿದರು.  

ಎಸ್ಡಿಎಂಸಿ ಅಧ್ಯಕ್ಷ ಬಿ.ಎಂ. ಕರಿಬಸಯ್ಯಸ್ವಾಮಿ ಮಾತನಾಡಿ, ಶಾಲೆಯ ಶೈಕ್ಷಣಿಕ ವಾತಾವರಣ ಹದಗೆಟ್ಟಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ. ಕಳೆದ ಎಂಟು ತಿಂಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಒಂದು ವಾರದೊಳಗೆ ಮುಖ್ಯಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್‌.ಎಂ. ರಾಮಯ್ಯ ಮಾತನಾಡಿ, ಮುಖ್ಯಶಿಕ್ಷಕಿ ಶಾಲೆಗೆ ನಿಯಮಿತವಾಗಿ ಹಾಜರಾಗುವುದಿಲ್ಲ. ಶಾಲೆಯ ಸ್ವಚ್ಛತೆ ಹಾಗೂ ಆಡಳಿತದ ಕಡೆ ನಿರ್ಲಕ್ಷ್ಯ ವಹಿಸಿದ್ದು, ಸಹ ಶಿಕ್ಷಕರಿಗೂ ಕಿರುಕುಳ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಆರೋಪಿಸಿದರು.  

ಸಹ ಶಿಕ್ಷಕಿ ಮಂಜುಳಾ ಮಾತನಾಡಿ, ತಮಗೆ ನಿರಂತರವಾಗಿ ನೋಟಿಸ್ ನೀಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಶಾಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರೂ ಅನಗತ್ಯ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.  

ಈ ಸಂದರ್ಭದಲ್ಲಿ ಅಂಜಮ್ಮ, ಜೀವನಜ್ಯೋತಿ ಟ್ರಸ್ಟ್‌ ಅಧ್ಯಕ್ಷ ಅಂಕಲೇಶ್, ಮಹಾಂತೇಶ್, ಹೆಚ್‌. ಕುಮಾರಸ್ವಾಮಿ, ಹುಲುಗಪ್ಪ, ರಾಜಾವಳಿ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.