ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ  Demand for stringent punishment for atrocities against girls

ಲೋಕದರ್ಶನ ವರದಿ 

ಧಾರವಾಡ, ಜು.10: ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಧಾರವಾಡ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿತು.  

ಸಂಘಟನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಶ್ಚಿಮ ಬಂಗಾಳದ ಬಾರುಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹಿಂಸಿಸಿ ಬಾವಿಗೆ ಎಸೆದ ಪರಿಣಾಮ ಬಾಲಕಿ ಮೃತಪಟ್ಟಿರುವುದು ಹಾಗೂ ರಾಜಸ್ಥಾನದ ಶ್ರೀಗಂಗಾನಗರದಲ್ಲಿ 13 ವರ್ಷದ ಬಾಲಕಿಯನ್ನು ಆಟೋ ಚಾಲಕನೊಬ್ಬ ಹೋಟೆಲ್ ಮಾಲೀಕನಿಗೆ ಮಾರಾಟ ಮಾಡಿದ ಬಳಿಕ ಹಲವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟಿರುವ ಘಟನೆಗಳು ದೇಶವನ್ನೇ ಬೆಚ್ಚಿಬೀಳಿಸಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.  

ಈ ಎರಡೂ ಪ್ರಕರಣಗಳಲ್ಲಿನ ಆರೋಪಿಗಳಿಗೆ ಕಾನೂನುಬದ್ಧವಾಗಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ತನಿಖೆಯನ್ನು ತ್ವರಿತಗೊಳಿಸಿ ನ್ಯಾಯ ದೊರಕಿಸಬೇಕು. ಇಂತಹ ಪ್ರಕರಣಗಳಲ್ಲಿ ವಿಳಂಬ ಅಥವಾ ಕಣ್ಣೊರೆಸುವ ಕ್ರಮಗಳನ್ನು ಜನರು ಸಹಿಸುವುದಿಲ್ಲ ಎಂದು ಸಂಘಟನೆ ಆಗ್ರಹಿಸಿದೆ.  

ದೇಶಾದ್ಯಂತ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಸಾಮೂಹಿಕ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲತೆಯನ್ನು ನಿಯಂತ್ರಿಸಬೇಕು. ಮದ್ಯಪಾನ ಮತ್ತು ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಯಲು ಕಠಿಣ ಕ್ರಮ ಜರುಗಿಸಬೇಕು. ಹೆಣ್ಣುಮಕ್ಕಳ ಘನತೆ, ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವ ಸಾಮಾಜಿಕ ವಾತಾವರಣ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಇದೇ ವೇಳೆ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಬಲಿಷ್ಠ ಜನಾಂದೋಲನವನ್ನು ರೂಪಿಸುವ ಅಗತ್ಯವಿದೆ ಎಂದು ಎಐಎಂಎಸ್‌ಎಸ್ ಕರೆ ನೀಡಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಐಎಂಎಸ್‌ಎಸ್ ಧಾರವಾಡ ಜಿಲ್ಲಾ ಅಧ್ಯಕ್ಷೆ ಮಧುಲತಾ ಗೌಡರ್, ಕಾರ್ಯದರ್ಶಿ ಗಂಗೂಬಾಯಿ ಕೋಕರೆ ಹಾಗೂ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್ ಉಪಸ್ಥಿತರಿದ್ದರು.