ಆನ್ ಲೈನ್ ಗೇಮ್ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಒತ್ತಾಯ

ಆನ್ ಲೈನ್ ಗೇಮ್ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಒತ್ತಾಯ Demand for strict implementation of the Online Games Prohibition Act

ಬೀದರ್ 20: ಹಣ ಪಣಕ್ಕಿಟ್ಟು ಆಟವಾಡುವ ಎಲ್ಲ ತರಹದ ಆನ್ ಲೈನ್ ಗೇಮ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಕಠಿಣ ಕಾಯ್ದೆ ರೂಪಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲೂ ಈ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ. 

ರಮ್ಮಿ ಜೂಜಾಟ ಸೇರಿದಂತೆ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ-2025 ಈಗಾಗಲೇ ಅಂಗೀಕಾರಗೊಂಡಿದ್ದು,  ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಅ.1ರಿಂದ ಹೊಸ ಕಾಯ್ದೆಯಡಿ ಕಠಿಣ ನಿಯಮ ಜಾರಿಗೊಳ್ಳಲಿವೆ. ಈ ಕಾಯ್ದೆ ಜಾರಿ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಐತಿಹಾಸಿಕ ದಿಟ್ಟ ಹೆಜ್ಜೆ ಇರಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.  

ಆನ್ ಲೈನ್ಪ್ ಗೇಮಿಂಗ್ ನಿಷೇಧ ಕಾಯ್ದೆಯು ಯುವಸಮೂಹ ಈ ಚಟಕ್ಕೆ ದಾಸರಾಗುವುದನ್ನು ತಡೆಗಟ್ಟಲಿದೆ. ಹಣಕಾಸು ವಂಚನೆ, ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕಲಿದೆ. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ವರೆಗೆ ದಂಡ  ವಿಧಿಸುವ ಅವಕಾಶ ಕಲ್ಪಿಸಿರುವುದು ಸ್ತುತ್ಯಾರ್ಹವಾಗಿದೆ. ಈ ನಿಷೇಧ ಕಾಯ್ದೆ ಜಾರಿಯಿಂದಾಗಿ ಅನೇಕ ಕುಟುಂಬಗಳ ಆರ್ಥಿಕ ಸ್ಥಿರತೆ ಕಾಪಾಡಲಿದೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಕಾಯ್ದೆ ವರದಾನ ಎನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಯುವ ಪೀಳಿಗೆಯ ಭವಿಷ್ಯ ಹಾಳು ಮಾಡುವ ಆನ್‌ಲೈನ್ ಗೇಮಿಂಗ್ ಗಳು ಸಮಾಜದಲ್ಲಿ ಗಂಭೀರ ಸಮಸ್ಯೆ ಸೃಷ್ಟಿಸುತ್ತಿವೆ. ಸಾಮಾಜಿಕ ವ್ಯವಸ್ಥೆ ಜೊತೆಗೆ 

ಶಿಕ್ಷಣ, ಉದ್ಯೋಗ, ಕುಟುಂಬ ಜೀವನಗಳ ಮೇಲೂ ದುಷ್ಪರಿಣಾಮ ಬೀರುವ ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಸಮಾಜ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ  ಕಾಯ್ದೆಯ ಕಠಿಣ ಅನುಷ್ಠಾನಕ್ಕೆ  ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು. ಇಲ್ಲದಿದ್ದರೆ ಪಕ್ಷ ಜನಹಿತದಿಂದ ಹೋರಾಟ ನಡೆಸುವುದು ಅನಿವಾರ್ಯ ಎಂದು ಡಾ.ಬೆಲ್ದಾಳೆ ಎಚ್ಚರಿಸಿದ್ದಾರೆ.