ಭೂರಹಿತ ದಲಿತರಿಗೆ ಭೂಮಿ, ವಸತಿ ರಹಿತರಿಗೆ ಮನೆ ಕಲ್ಪಿಸುವ ಬೇಡಿಕೆ

ಭೂರಹಿತ ದಲಿತರಿಗೆ ಭೂಮಿ, ವಸತಿ ರಹಿತರಿಗೆ ಮನೆ ಕಲ್ಪಿಸುವ ಬೇಡಿಕೆ   Demand for land for landless Dalits and houses for the homeless

ಗದಗ, ಜೂ.29: ದಲಿತ, ಶೋಷಿತ ಮತ್ತು ಹಿಂದುಳಿದ ಸಮುದಾಯಗಳ 19 ರಿಂದ 20 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 3 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ದಲಿತ ಜನಾಗ್ರಹ ಸಮಾವೇಶ ಹಾಗೂ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಎಚ್‌.ಡಿ. ಪೂಜಾರ ತಿಳಿಸಿದ್ದಾರೆ.  

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿಎಸ್ಪಿ/ಟಿಎಸ್ಪಿ ಅನುದಾನದ ದುರುಪಯೋಗ ತಡೆದು, ದಲಿತರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಏಕಗವಾಕ್ಷಿ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.  

ಭೂರಹಿತ ದಲಿತ ಕುಟುಂಬಗಳಿಗೆ ಕೃಷಿ ಭೂಮಿ ಒದಗಿಸುವುದು, ವಸತಿ ರಹಿತರಿಗೆ ಮನೆ ಕಲ್ಪಿಸುವುದು, ಸರ್ಕಾರಿ ಇಲಾಖೆಗಳಲ್ಲಿ ವರ್ಷಗಳಿಂದ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.  

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಭೂ ಒಡೆತನಕ್ಕೆ ಸಂಬಂಧಿಸಿದ ಸಾವಿರಾರು ಬಾಕಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಪಿ.ಟಿ.ಸಿ.ಎಲ್‌. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯ ಮತ್ತು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅವರು ತಿಳಿಸಿದರು.  

ಉಡುಪಿ, ಬೀದರ್, ಯಾದಗಿರಿ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ದಲಿತ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.  

ಸರ್ಕಾರಕ್ಕೆ ತಮ್ಮ ಹಕ್ಕುಗಳ ಬಗ್ಗೆ ಎಚ್ಚರಿಕೆ ನೀಡುವ ಹಾಗೂ ದಲಿತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವ ಉದ್ದೇಶದಿಂದ ಈ ಬೃಹತ್ ಜಾಗೃತಿ ಹೋರಾಟ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.  

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಬಾಲರಾಜ ಅರಬರ, ಸತೀಶ ಪೂಜಾರ, ನಾಗರಾಜ ಗೋಕಾವಿ, ಮಲ್ಲಿಕಾರ್ಜುನ ಗೌಡಣ್ಣವರ, ಪೂಜಾ ಬೇವೂರ, ಚೇತನಾ ಶಿತರಹಳ್ಳಿ, ಮುತ್ತಪ್ಪ ಭಜಂತ್ರಿ, ಕೇಂಚಪ್ಪ ಮ್ಯಾಗೇರಿ, ಸಂತೋಷ ಹಸನಸಾಬ ತಹಶೀಲ್ದಾರ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.