ಪರಿಷ್ಕೃತ ಕನಿಷ್ಟ ವೇತನ ಜಾರಿಗಾಗಿ ಒತ್ತಾಯ

ಪರಿಷ್ಕೃತ ಕನಿಷ್ಟ ವೇತನ ಜಾರಿಗಾಗಿ ಒತ್ತಾಯ Demand for implementation of revised minimum wages

ಲೋಕದರ್ಶನ ವರದಿ

ಧಾರವಾಡ ೧೮: ಕನಿಷ್ಟ ವೇತನ ಪರಿಷ್ಕರಿಸಿ ತಾನೆ ಹೊರಡಿಸಿದ್ದ ಅಧಿಸೂಚನೆಯನ್ನು ಮಾಲೀಕರ ಲಾಭಿಗೆ ಮಣಿದು ಅಧಿಸೂಚನೆಯನ್ನು ತಡೆಹಿಡಿದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮರುಪರಿಷ್ಕರಣೆಗಾಗಿ ಸಚಿವ ಸಂಪುಟ ಉಪಸಮಿತಿ ರಚಿಸುವ ಮೂಲಕ ಸಾಮಾಜಿಕ ನ್ಯಾಯ ನಿರಾಕರಿಸಿ ಒಂದು ಕೋಟಿಗೂ ಅಧಿಕ ಶ್ರಮಜೀವಿಗಳ ಬದುಕಿಗೆ ಮಹಾದ್ರೋಹ ಬಗೆದಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಸರಕಾರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಇAದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಕಚೇರಿ ಎದುರು ಗ್ರಾಮ ಪಂಚಾಯತ ನೌಕರರು ಹಾಗೂ ಸ್ವಚ್ಛವಾಹಿನಿ ನೌಕರರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕನಿಷ್ಟ ವೇತನ ವ್ಯಾಪ್ತಿಯಲ್ಲಿ ಬರುವ ಕೋಟ್ಯಾಂತರ ಜನರಿಗೆ ೨೦೧೬ ರಿಂದ ವೇತನ ಪರಿಷ್ಕರಣೆ ಬಾಕಿ ಇತ್ತು. ಇದಕ್ಕಾಗಿ ಕಾರ್ಮಿಕರು, ಕಾರ್ಮಿಕ ಸಂಘಗಳು ನಿರಂತರವಾದ ಹೋರಾಟ ನೆಡೆಸಿದ್ದವು. ಹೈಕೋರ್ಟ್ ಕೂಡ ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾಯಬದ್ದ ಕನಿಷ್ಟ ವೇತನ ನಿಗದಿಪಡಿಸಲು ಸೂಚನೆ ನೀಡಿತ್ತು. ಅದರ ಆಧಾರದಲ್ಲಿ ರಾಜ್ಯ ಕನಿಷ್ಟ ವೇತನ ಸಲಹಾ ಸಮಿತಿ ಸತತ ಮೂರು ನಾಲ್ಕು ವರ್ಷಗಳಿಂದ ಹಲವು ಸಭೆಗಳನ್ನು ನಡೆಸಿ ಅಂತಿಮವಾಗಿ ಬೆಲೆ ಏರಿಕೆ ಸೂಚ್ಯಂಕಗಳನ್ನು ಆಧರಿಸಿ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ಈ ಕನಿಷ್ಟ ವೇತನಗಳನ್ನು ನಿಗದಿಪಡಿಸಿತ್ತು. ಅದು ಜಾರಿ ಹಂತದಲ್ಲಿರುವಾಗ ಕಾರ್ಮಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದರು.

ಪರಿಸ್ಕೃರಿಸಿ ಪ್ರಕಟಿಸಿದ ಕನಿಷ್ಟ ವೇತನ ಜಾರಿ ಮಾಡಬೇಕು, ಮರು ಪರಿಸ್ಕರಣೆಗಾಗಿ ರಚಿಸಿದ ಸಚಿವ ಸಂಪುಟ ಉಪ ಸಮಿತಿ ರದ್ದಾಗಬೇಕು, ಸೇವಾ ಹಿರಿತನ, ಭತ್ಯೆ ಹೆಚ್ಚಳ, ಇಡಿಗಂಟು, ಆರೋಗ್ಯ ವಿಮೆ, ಗ್ರಾಚೂಟಿ ಜಾರಿಮಾಡಬೇಕು ಹಾಗೂ ಸ್ವಚ್ಛವಾಹಿಸಿ ತರಬೇತಿ ಪಡೆದ ಎಲ್ಲರಿಗೂ ಕೆಲಸ ಮತ್ತು ವೇತನ ನೀಡಬೇಕೆಂಬ ಪ್ರಮುಖ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಭುವನೇಶ ಪಾಟೀಲ ಅವರು ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾ ಹಂತದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಪ್ರಯತ್ನಿಸುತ್ತೇವೆ. ಉಳಿದ ನಿಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಕಳಿಸುತ್ತೇವೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಹುಜರಾತಿ, ಪ್ರಧಾನ ಕಾರ್ಯದರ್ಶಿ ಮಹೇಶ ಹುಲಗೋಡ, ವಿ.ಸಿ. ತುಪ್ಪದಗೌಡ್ರ, ನೀಲವ್ವ ಕುರುಬರ, ಎನ್.ಎಂ. ಪಾಟೀಲ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು