ಕನಿಷ್ಠ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯ

ಕನಿಷ್ಠ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯ  Demand for implementation of minimum wage revision

ಇಂಡಿ 14 : ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವುದು, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದು ಹಾಗೂ ಕೆಲಸದ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಇಂಡಿ ಘಟಕದ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅವರ ಕಚೇರಿಯ ಶ್ರೀಕಾಂತ ಪೂಜಾರಿ ಅವರಿಗೆ ನೌಕರರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಾನಮ್ಮ ಹೂಗಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಳೆದ 15ಹಿ20 ವರ್ಷಗಳಿಂದ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್ಗಳು, ಕಂಪ್ಯೂಟರ್ ಆಪರೇಟರ್ಗಳು, ಡಾಟಾ ಎಂಟ್ರಿ ಆಪರೇಟರ್ಗಳು ಹಾಗೂ ಹೊರಗುತ್ತಿಗೆ ಅತಿಥಿ ಶಿಕ್ಷಕರು ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಹೊರಗುತ್ತಿಗೆ ಸಿಬ್ಬಂದಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ.

ಗುತ್ತಿಗೆದಾರರು, ವಾರ್ಡನ್ಗಳು ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಿಬ್ಬಂದಿಗೆ ಶೋಷಣೆ ಹಾಗೂ ಕಿರುಕುಳ ನಡೆಯುತ್ತಿದೆ. ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕುವ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.  ಆದ್ದರಿಂದ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸುವುದು, ನೌಕರರನ್ನು ಖಾಯಂಗೊಳಿಸುವುದು ಹಾಗೂ ಉದ್ಯೋಗ ಭದ್ರತೆ ಕಲ್ಪಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಜನಿ ಬನಸೋಡೆ, ನೂರಜಾನ ರೇವರಕರ, ಭಾರತಿ ತಳವಾರ, ಪುಲಾಬಾಯಿ ತಳವಾರ, ಸುನೀತಾ ರಾಠೋಡ, ದವಲಾಸಾಬ ಕಸ್ಸಾಬ, ಪ್ರಕಾಶ್ ದೇಸಾಯಿ, ಶಿವಾನಂದ ಮೇಲಿನಕೇರಿ, ಗಂಗಾಬಾಯಿ ಸತ್ತಳಾಕರ, ಸವಿತಾ ಪಾಟೀಲ, ಸುಮಂಗಲಾ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.