ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ  Demand for action against illegal activities within the Town Panchayat limits

ಲೋಕದರ್ಶನ ವರದಿ 

ದೇವರಹಿಪ್ಪರಗಿ 22: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರದಿಂದ 65.31 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ, ಸರ್ವೇ ನಂ. 56/3ರಲ್ಲಿ 6.35 ಎಕರೆ ಜಮೀನು ಖರೀದಿಸದೆ ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ ಆಗ್ರಹಿಸಿದರು.  

ಪಟ್ಟಣದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದ ಬಳಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಮೂರನೇ ದಿನ ಮಾತನಾಡಿದ ಅವರು, ಪ.ಪಂ. 2015-16ರಿಂದ 2025-26ನೇ ಸಾಲಿನ ಹಣಕಾಸು ಯೋಜನೆ ಹಾಗೂ ಎಸ್‌ಎಫ್ಸಿ ಯೋಜನೆಯಡಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.  

ಕರವೇ ತಾಲ್ಲೂಕು ಅಧ್ಯಕ್ಷ ರಹೀಮಾನ ಕನಕಲ್ ಹಾಗೂ ಕೆಆರ್‌ಎಸ್ ಪಕ್ಷದ ರಾಜ್ಯ ಮುಖಂಡ ಶಿವಾನಂದ ಯಡಹಳ್ಳಿ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್‌.ಎ. ನಿವೇಶನಗಳನ್ನು ಅಭಿವೃದ್ಧಿಪಡಿಸದೆ ಮಾರಾಟ ಮಾಡಿರುವುದು ಖಂಡನೀಯ. ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡದೆ ವಿವಿಧ ಇಲಾಖೆಗಳು ಹಾಗೂ ಹಲವು ವಾರ್ಡ್ಗಳಲ್ಲಿ ಇ-ಸ್ವತ್ತು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸದೆ ಇರುವುದರಿಂದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.  

ಕರವೇ ತಾಲ್ಲೂಕು ಉಪಾಧ್ಯಕ್ಷ ನಾಗೇಶ ಕಮತಗಿ, ಕಾರ್ಮಿಕ ಘಟಕದ ಅಧ್ಯಕ್ಷ ಹಸನ್ ಭಾಗವಾನ್, ಸಂಘಟನಾ ಕಾರ್ಯದರ್ಶಿ ಭೀರು ಹಳ್ಳಿ, ಮಡಿವಾಳಯ್ಯ ಮಠಪತಿ, ಅಜೀಮ್ ಪಟೇಲ್, ಅಶ್ವಕ್ ಕೊಡಚಿ ಸೇರಿದಂತೆ ಡಿಎಸ್‌ಎಸ್, ಕೆಆರ್‌ಎಸ್ ಹಾಗೂ ಕರವೇ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.