ಇ-ಕೆವೈಸಿ ಸಮಸ್ಯೆಯಿಂದ ಪಡಿತರ ವಿತರಣೆಗೆ ವಿಳಂಬ: ನ್ಯಾಯಬೆಲೆ ಅಂಗಡಿ ಮಾಲೀಕರ ಅಸಮಾಧಾನ

ಇ-ಕೆವೈಸಿ ಸಮಸ್ಯೆಯಿಂದ ಪಡಿತರ ವಿತರಣೆಗೆ ವಿಳಂಬ: ನ್ಯಾಯಬೆಲೆ ಅಂಗಡಿ ಮಾಲೀಕರ ಅಸಮಾಧಾನ  Delay in ration distribution due to e-KYC issues: Fair Price Shop owners express dissatisfaction


ಕಾರವಾರ, ಸೆ. 1: ಪಡಿತರ ವಿತರಣೆಯಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರವಾರ ತಾಲೂಕು ಗ್ರಾಮೀಣ ಹಾಗೂ ನಗರ ನ್ಯಾಯಬೆಲೆ ಅಂಗಡಿ ಮಾಲೀಕರ ಒಕ್ಕೂಟದ ಅಧ್ಯಕ್ಷ ವೆಂಕಟೇಶ ಎಚ್‌. ನಾಯ್ಕ್‌ ಹೇಳಿದರು.  

ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ವರ್ ಸಮಸ್ಯೆಯಿಂದಾಗಿ ಒಂದು ರೇಷನ್ ಕಾರ್ಡ್ನ ಪಡಿತರ ವಿತರಿಸಲು 10ರಿಂದ 20 ನಿಮಿಷಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಬೆಳಿಗ್ಗೆ ಪಡಿತರ ಪಡೆಯಲು ಬರುವ ಬಡ ಪಡಿತರದಾರರು ಗಂಟೆಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.  

ತಾಂತ್ರಿಕ ಸಮಸ್ಯೆಗಳ ನಡುವೆಯೂ ಪ್ರತಿಯೊಬ್ಬ ಕಾರ್ಡ್ದಾರರ ಸದಸ್ಯರ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ಕಾರ್ಡ್ನಲ್ಲಿ ಮೂರರಿಂದ ಐದು ಸದಸ್ಯರಿರುವುದರಿಂದ ಇ-ಕೆವೈಸಿಗೆ ಹೆಚ್ಚಿನ ಸಮಯ ಬೇಕಾಗುತ್ತಿದೆ. ಸರ್ವರ್ ಪದೇಪದೇ ಸ್ಥಗಿತಗೊಳ್ಳುತ್ತಿರುವ ಕಾರಣ ನಿಗದಿತ ಅವಧಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವುದು ಅಸಾಧ್ಯವಾಗಿದೆ ಎಂದು ಅವರು ತಿಳಿಸಿದರು.  

ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಪಡಿತರ ಅಂಗಡಿ ನೌಕರರು ಹಾಗೂ ಮಾಲೀಕರ ಒಕ್ಕೂಟ ಒತ್ತಾಯಿಸಿದೆ. ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಿರುವುದು ಸರಿಯಲ್ಲ.

ಹೆಚ್ಚುವರಿ ಸಿಬ್ಬಂದಿಗೆ ವೇತನ ಹಾಗೂ ಸೂಕ್ತ ಕಮಿಷನ್ ವ್ಯವಸ್ಥೆ ಮಾಡದೆ ಇಂತಹ ಕಾರ್ಯಾವಧಿ ವಿಧಿಸುವುದು ಅವೈಜ್ಞಾನಿಕ ಎಂದು ಒಕ್ಕೂಟದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.  

ಐದು ವರ್ಷಗಳ ಹಿಂದೆ ನಡೆಸಿದ ಇ-ಕೆವೈಸಿ ಕಾರ್ಯದ ಕಮಿಷನ್ ಹಣವೂ ಇನ್ನೂ ಬಿಡುಗಡೆಯಾಗಿಲ್ಲ. ಅಲ್ಲದೆ, ಪ್ರತಿತಿಂಗಳ ಪಡಿತರ ವಿತರಣೆಯ ಕಮಿಷನ್ ಕೂಡ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ದೂರಿದರು.  

ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಬಾಕಿ ಇರುವ ಕಮಿಷನ್ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ಇ-ಕೆವೈಸಿ ಕಾರ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒಕ್ಕೂಟವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.  

ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ ಎಂದು ಒಕ್ಕೂಟ ತಿಳಿಸಿದೆ.  ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಸೈಯದ್, ಕಿನ್ನರ್, ಪೂಜಾ ನಾಯ್ಕ್‌, ದೇವಿಕಾ ನಾಯ್ಕ್‌, ಕೈಲಾಸ, ವಿ.ಡಿ. ಶೆಟ್ಟಿ, ರೋಹಿದಾಸ್ ಮಾಳೇಕರ್ ಹಾಗೂ ಮಾದೇವ ಮಾರಾಟೆ ಉಪಸ್ಥಿತರಿದ್ದರು.