ಸಕ್ಕರೆ ಕಾರ್ಖಾನೆಯಿಂದ ಕಬ್ಬು ಖರೀದಿಗೆ ವಿಳಂಬ; ಆತಂಕದಲ್ಲಿ ರೈತರು
ಕಂಪ್ಲಿ 17: ಸಿರಗುಪ್ಪ ತಾಲ್ಲೂಕು ದೇಶನೂರು ಗ್ರಾಮದ ಎನ್.ಎಸ್.ಎಲ್. ಶುಗರ್ಸ್‌ನವರು ತಾವು ಮಾಡಿಕೊಂಡ ಒಪ್ಪಂದಂತೆ ಕಂಪ್ಲಿ ತಾಲ್ಲೂಕಿನ ರೈತರ ಕಬ್ಬು ಖರೀದಿಸಬೇಕೆಂದು ರಾಮಸಾಗರ ಗ್ರಾಮದ ರೈತರು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ. ಕಳೆದ ಮೂರು ವರ್ಷ ಕಬ್ಬು ಖರೀದಿಸಿ ಪೂರ್ಣ ಬೆಲೆಯನ್ನು ಪಾವತಿಸಿದ್ದರು.
ಆದರೆ ಈ ವರ್ಷ ರೈತರಿಂದ ಕಬ್ಬು ಖರೀದಿಸದೇ ನಿರ್ಲಕ್ಷ್ಯ ವಹಿಸಿದ್ದು, ಇದೀಗ ಉತ್ತಮವಾಗಿ ಬೆಳೆದು ನಿಂತಿರುವ ಕಬ್ಬನ್ನು ಸುಟ್ಟು ಅರ್ಧ ಬೆಲೆಗೆ ಕೊಡುವಂತೆ ತಾಕೀತು ಮಾಡುತ್ತಿದ್ದಾರೆಂದು ರೈತರು ಆರೋಪಿಸಿದರು.
ಒಂದು ಟನ್ ಕಬ್ಬಿಗೆ 3,150 ರೂ ಬೆಲೆಯ ಕಬ್ಬನ್ನು ಸುಡಿಸಿ ಟನ್‌ಗೆ 1,550 ರೂ ಬೆಲೆಗೆ ನೀಡುತ್ತಾರೆ. ಅಲ್ಲದೆ, ಶೇ.25ರಷ್ಟು ದರ ಕಡಿತಗೊಳಿಸುವ ಜೊತೆಗೆ ಕಬ್ಬು ಕಟಾವು ಶುಲ್ಕವನ್ನು ರೈತರ ಮೇಲೆ ಹೇರಿದ್ದಾರೆ. ಇದರಿಂದ ಒಂದು ಟನ್ ಕಬ್ಬಿಗೆ 1650 ರೂ ನಷ್ಟವಾಗುತ್ತಿದೆ. ಇದಕ್ಕೂ ಮೊದಲು ಉಚಿತವಾಗಿ ರಸಗೊಬ್ಬರ ವಿತರಿಸುವುದಾಗಿ ಹೇಳಿದ ಸಕ್ಕರೆ ಕಾರ್ಖಾನೆಯವರು ನಂತರ ರಸಗೊಬ್ಬರವನ್ನು ವಿತರಿಸಲಿಲ್ಲ ಎಂದು ಆರೋಪಿಸಿದರು.
ಎಕರೆ ಕಬ್ಬು ಬೆಳೆ ನಿರ್ವಹಣೆಗೆ ಸುಮಾರು 70 ಸಾವಿರ ರೂಗಳ ಖರ್ಚು ಮಾಡಿದ್ದೇವೆ. ಕರಡಿ ಹಾವಳಿಯಿಂದ ಕಬ್ಬು ಬೆಳೆಯ ಇಳುವರಿಯೂ ಕಡಿಮೆಯಾಗಿದೆ. ನವೆಂಬರ್ ತಿಂಗಳಿನಿಂದ ಕಬ್ಬು ಕಟಾವ್ ಮಾಡುವಂತೆ ಕಾರ್ಖಾನೆಯ ಅಧಿಕಾರಿಗಳನ್ನು ಆಗ್ರಹಿಸಿದ್ದರೂ ಕಡೆಗಣಿಸಿದ್ದಾರೆ ಎಂದು ರಾಮಸಾಗರ ಗ್ರಾಮದ ಕಬ್ಬು ಬೆಳೆಗಾರರಾದ ಆರ್‌ಟಿ.ಕಿಶೋರಗೌಡ, ಸಿದ್ದನಗೌಡ, ಪುಟ್ಟಿ ವೀರೇಶ್, ಮಹಾದೇವಗೌಡ ಸೇರಿದಂತೆ ಇತರೆ ರೈತರು ಆರೋಪಿಸಿದರು.
ರಾಜ್ಯ ಕಿಸಾನ್ ಜಾಗೃತಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ ಸಿರಗುಪ್ಪದ ದೇಶನೂರು ಸಕ್ಕರೆ ಕಾರ್ಖಾನೆಯವರು ಒಪ್ಪಂದ ಮಾಡಿಕೊಂಡಂತೆ ಒಂದು ಟನ್‌ಗೆ 3150 ರೂ ದರದಂತೆ ಎರಡು ದಿನದೊಳಗೆ ಕಬ್ಬು ಖರೀದಿ ಮಾಡಬೇಕು ಇಲ್ಲವಾದಲ್ಲಿ ಕಾರ್ಖಾನೆ ಮುಂದೆ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.