ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಧಿಕ್ಕರಿಸಿ ಡಿ.15ರಂದು ಸುವರ್ಣಸೌಧ ಚಲೋ!

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಧಿಕ್ಕರಿಸಿ ಡಿ.15ರಂದು ಸುವರ್ಣಸೌಧ ಚಲೋ!  Defy the KPS Magnet project: Suvarna Soudha Chalo on December 15!

ಬೆಳಗಾವಿ 10: ಕರ್ನಾಟಕ ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ 3 ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಇಂದು ಬೆಳಗಾವಿಯ ಬಾಳೆಕುಂದ್ರಿ ಕೆಎಚ್‌ನಲ್ಲಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  

ಬಾಳೆಕುಂದ್ರಿ ಕೆಎಚ್‌ನ ಕನ್ನಡ, ಮರಾಠಿ, ಉರ್ದು ಸೇರಿದಂತೆ 3 ಶಾಲೆಗಳು, ಸಾಂಬ್ರಾದ ಕನ್ನಡ ಹಾಗೂ ಮರಾಠಿ ಸೇರಿದಂತೆ 2 ಶಾಲೆಗಳು, ಪಂತ್ ನಗರದ ಕಿರಿಯ ಪ್ರಾಥಮಿಕ ಶಾಲೆ, ಹೊನ್ನಿಹಾಳದ ಕನ್ನಡ ಹಾಗೂ ಮರಾಠಿ ಸೇರಿದಂತೆ 2 ಶಾಲೆ ಹಾಗೂ ಬಾಳೆಕುಂದ್ರಿ ಬಿಕೆಯ ಕನ್ನಡ ಶಾಲೆ ಒಳಗೊಂಡಂತೆ ಒಟ್ಟು 9 ಶಾಲೆಗಳನ್ನು ಮುಚ್ಚಿ ಬಾಳೆಕುಂದ್ರಿ ಬಿಕೆ ಉರ್ದು ಶಾಲೆಗೆ ಸೇರಿಸಲಾಗುತ್ತಿದೆ. ಎಲ್ಲಾ ಊರಿನ ಶಾಲೆಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವ ಪಾಲಕರು ಹಾಗೂ ಗ್ರಾಮಸ್ಥರು ಡಿಸೆಂಬರ್ 15ರಂದು ಎಐಡಿಎಸ್‌ಓ ಕರೆ ನೀಡಿರುವ ಸುವರ್ಣಸೌಧ ಚಲೋ ಚಳುವಳಿಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.  

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಮಹಾಂತೇಶ್ ಬೀಳೂರ್ ಮಾತನಾಡಿ, ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಿರುವ ಸರ್ಕಾರವು ಕೇವಲ ಬೆಳಗಾವಿಯಲ್ಲೇ 2,283 ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಿದೆ. ರಾಜ್ಯಾದ್ಯಂತ 40,000 ಶಾಲೆಗಳನ್ನು ಮುಚ್ಚಲಾಗುತ್ತದೆ. ಮತ್ತು ಮುಚ್ಚುವ ಶಾಲಾ ಕಟ್ಟಡಗಳನ್ನು ಖಾಸಗಿ ಸಂಘ ಸಂಸ್ಥೆಗಳ ಬಳಕೆಗೆ ಒದಗಿಸುವ ಮಸೂದೆಯನ್ನು ಈಗಾಗಲೇ ತಯಾರಿಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರವು ಕಡು ಜನ ವಿರೋಧಿಯಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಬಡವರ ಮಕ್ಕಳನ್ನು ಶಾಶ್ವತವಾಗಿ ಶಿಕ್ಷಣದಿಂದ ದೂರ ತಳ್ಳುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ನಸುಕಿನಲ್ಲೇ ಎದ್ದು ಕೂಲಿ ಕೆಲಸಗಳಿಗೆ ಹೋಗುವ ಬಡ ಕಾರ್ಮಿಕರು ಊರಿನ ಶಾಲೆಯ ಭರವಸೆ ಮೇಲೆ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಊರಿನ ಶಾಲೆಗಳನ್ನು ಮುಚ್ಚುವ ಮೂಲಕ ಸರ್ಕಾರವು ಈ ಭರವಸೆಯನ್ನು ಕೊಲ್ಲುತ್ತಿದೆ. ಚಿಕ್ಕ ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು ದೂರದ ಶಾಲೆಗಳಿಗೆ ಪ್ರಯಾಣ ಮಾಡಿ ಹೋಗುವುದು ಎಷ್ಟು ಸುರಕ್ಷಿತ? ಅಲ್ಲಿ ನಮ್ಮ ಮಕ್ಕಳಿಗೆ ಏನಾದರೂ ಆದರೆ ಯಾರು ಜವಾಬ್ದಾರಿ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಬೇಕು.  

ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಲಿಖಿತ ಆದೇಶವನ್ನು ಸರ್ಕಾರ ನೀಡುವವರೆಗೂ ಹೋರಾಟ ಮುಂದುವರಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಡಿಸೆಂಬರ್ 15ರಂದು ನಡೆಯುತ್ತಿರುವ ಸುವರ್ಣಸೌಧ ಚಲೋ ಚಳುವಳಿಗೆ ಕರೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಾಲೆಯನ್ನು ಉಳಿಸುವ ಹೋರಾಟಕ್ಕಾಗಿ ಊರಿನ ಪಾಲಕರು ಹಾಗೂ ಗ್ರಾಮಸ್ಥರನ್ನು ಸೇರಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.  

ಎಐಡಿಎಸ್‌ಓ ಸಂಘನಾಕಾರಾದ ಗಂಗಾಧರ ಸೇರಿದಂತೆ ಸಿದ್ದಪ್ಪ, ಪರಶುರಾಮ್, ಸಂದೀಪ್, ಉದಯ್ ಅಳಗುಂಡಿ, ಚಂದಾ ಲಂಬುಗೋಳ, ಸವಿತಾ ಧರೆನ್ನವರ, ಆರತಿ ಕಾಚುಗೋಳ,  ಮಂಗಳ ಅರಬಳ್ಳಿ ಮುಂತಾದ ಪಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.