ದೀಪೋತ್ಸವ-ಸಾಮರಸ್ಯ ಮೂಡಿಸಲಿ: ಖೊದ್ನಾಪೂರ

 ದೀಪೋತ್ಸವ-ಸಾಮರಸ್ಯ ಮೂಡಿಸಲಿ: ಖೊದ್ನಾಪೂರ Deepotsava - Let's create harmony: Khodnapur

ಲೋಕದರ್ಶನ ವರದಿ 

ದೀಪೋತ್ಸವ-ಸಾಮರಸ್ಯ ಮೂಡಿಸಲಿ: ಖೊದ್ನಾಪೂರ 

ವಿಜಯಪುರ 09: ನಮ್ಮ ದೇಶ ಹಲವು ಹಬ್ಬ, ಆಚರಣೆ, ಸಂಪ್ರದಾಯ, ಪದ್ಧತಿ ಮತ್ತು ಧಾರ್ಮಿಕ ಪರಂಪರೆಗಳಿಗೆ ಹೆಸರುವಾಸಿಯಾಗಿದೆ. ದೀಪವು ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನವೆಂಬ ಪ್ರಭೆಯನ್ನು ಬೆಳಗಿಸುತ್ತದೆ. ಮನದಲ್ಲಿರುವ ಕಲ್ಮಶ ಭಾವವನ್ನು ಅಳಿಸಿ ಸದ್ಗುಣಗಳನ್ನು ಒಡಮೂಡಿಸುವ ಸಂಕೇತವಾಗಿದೆ. ದೇವಸ್ಥಾನದಲ್ಲಿ ದೀಪೋತ್ಸವದಿಂದ ಧನಾತ್ಮಕ ಶಕ್ತಿಯು ಬಿಡುಗಡೆಗೊಳ್ಳುತ್ತದೆ. ಈ ದಿವ್ಯ ಜ್ಯೋತಿಯು ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತೊಲಗಿಸಿ, ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ-ಸಂಸ್ಕಾರ, ಧರ್ಮಸಹಿಂಷ್ಣುತೆ, ನಾವೆಲ್ಲರೂ ಒಂದೇ ಎಂಬ ಭಾವ ಒಡಮೂಡಿಸುತ್ತದೆ. ಧಾರ್ಮಿಕತೆಯೊಂದಿಗೆ ವೈಜ್ಞಾನಿಕ ನೆಲೆಗಟ್ಟನ್ನು ಹೊಂದಿರುವ ಈ ಕಾರ್ತಿಕ ದೀಪೋತ್ಸವ ಆಚರಣೆಯಿಂದ ದೇಶವು ಅನೇಕತೆಯಲ್ಲಿ ಏಕತೆಯ ಸಾಮರಸ್ಯತೆಯ ಭವ್ಯತೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರೊ.ಎಂ.ಎಸ್‌.ಖೊದ್ನಾಪೂರ ಹೇಳಿದರು.  

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್‌.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿ.8ರಂದು ಕಾರ್ತಿಕ ಮಾಸದ ಪ್ರಯುಕ್ತ ಜರುಗಿದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ನಮ್ಮೆಲ್ಲ ಸಂಕಷ್ಟಗಳನ್ನು ಪರಿಹರಿಸುವ ಭಕ್ತಿ ಭಾವದಿಂದ ಆರಾಧಿಸುತ್ತಾ, ಸಾಯಿಬಾಬಾ ದೇವರ ಅನುಗ್ರಹ ಪಡೆಯಬೇಕು. ದೀಪೋತ್ಸವವು ಅಜ್ಞಾನವೆಂಬ ಅಂಧಕಾರ ಅಳಿಸುತ್ತಾ ಮನದಲ್ಲಿ ಸುಜ್ಞಾನದ ದೀವಿಗೆಯನ್ನು ಹಚ್ಚುತ್ತದೆ. ದೇವರ ನಾಮಸ್ಮರಣೆ, ಸತ್ಸಂಗ, ಭಜನೆ, ಶ್ರೋತ್ರ ಪಠಣ, ಕೀರ್ತನ-ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಮಗೆ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಕಾರ್ತಿಕೋತ್ಸವ ಮಾಸದಲ್ಲಿ ದೀಪ ಬೆಳಗುವದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತವಾಗಿ ಸಮಸ್ಯೆಗಳಿಂದ ದೂರ ಮಾಡಬಲ್ಲದು. ಅದಕ್ಕಾಗಿ ನಾವೆಲ್ಲರೂ ಈ ಕಾರ್ತಿಕ ದೀಪೋತ್ಸವದಲ್ಲಿ ಭಾಗವಹಿಸಿ, ದೀಪದಿಂದ ದೀಪವನ್ನು ಬೆಳಗಿಸಿ, ಅದು ಪ್ರಜ್ವಲವಾಗಿ ನಾಡಿನಾದ್ಯಂತ ಶಾಂತಿ-ಸೌಹಾರ್ದತೆ, ಐಕ್ಯತೆ, ಸಾಮರಸ್ಯತೆ, ಧರ್ಮ ಸಹಿಂಷ್ಣುತೆ ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಮಂತ್ರ ಜಪಿಸುತ್ತಾ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯನ್ನು ದಯಪಾಲಿಸಲೆಂದು ಆಂಜನೇಯ ಸ್ವಾಮಿಯಲ್ಲಿ ಪ್ರಾರ್ಥಿಸೋಣ ಎಂದರು.    

ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ದೇವಸ್ಥಾನದಲ್ಲಿ ದೀಪೋತ್ಸವ ಆಚರಿಸುವದರ ಮೂಲಕ ಸಮಾಜದಲ್ಲಿ ಜಾತಿ-ಬೇಧಗಳು ದೂರ ಸರಿದು, ಸಮರಸ ಸಮಾಜ ನಿರ್ಮಾಣ ಮಾಡೋಣ. ನಮ್ಮ ಭವ್ಯ ಭಾರತದ ಸಂಸ್ಕೃತಿ-ಸಂಸ್ಕಾರ, ಧಾರ್ಮಿಕ ಆಚರಣೆಗಳನ್ನು ಪರಿಪಾಲಿಸುತ್ತಾ, ಮುಂದಿನ ಯುವ ಜನಾಂಗಕ್ಕೆ ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದರು.  

 ದೇವಸ್ಥಾನದ ಸಮಿತಿಯ ಬಿ.ಆರ್‌.ಬಿರಾದಾರ, ಎಸ್‌.ಜಿ.ನಿಂಗನಗೌಡ್ರ, ಬಾಬು ಕೋಲಕಾರ, ಶಿವಾನಂದ ಬಿಜ್ಜರಗಿ, ನಾನಾಸಾಬ ಕೂಟನೂರ, ರಮೇಶ ಕುಮಟಗಿ, ವೆಂಕಟೇಶ ಹೊಸಮನಿ, ಎಸ್‌.ಕೆ.ಪತ್ತಾರ, ಎಸ್‌.ಎಂ.ಸಾಲಿಮಠ, ಆನಂದ ದೈಗೊಂಡ, ಪ್ರೊ. ಮಾರುತಿ ಜೋಶಿ ಇನ್ನಿತರರು ಉಪಸ್ಥಿತರಿದ್ದರು.  

ಈ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ನಂತರ ನಡೆದ ಸಾಮೂಹಿಕ ಹನುಮಾನ ಚಾಲೀಸ ಪಠಣ ಮತ್ತು ಮಹಾಮಂಗಳಾರತಿಯಲ್ಲಿ ನವರಸಪುರದ ವಿವಿಧ ಬಡಾವಣೆಗಳ ಹಿರಿಯರು, ಯುವಕರು, ಮಹಿಳೆಯರು, ತಾಯಂದಿರು ಮತ್ತು ಮಕ್ಕಳು ಸೇರಿದಂತೆ ನೂರಾರು ಸದ್ಭಕ್ತರು ಭಾಗವಹಿಸಿದ್ದರು.