ಬೆಂಗಳೂರು, ಏ.3,ಸರ್ಕಾರಿ ನೌಕರರ ವೇತನ ನೀಡುವುದು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಹಣ ಒದಗಿಸಲು ಸರ್ಕಾರದ ಉನ್ನತಾಧಿಕಾರಿ ಗಳು ಹಿಂದೇಟು ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ.ಕೊರೋನಾ ಸಂಕಷ್ಟದಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ತೆರಿಗೆಯ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಆತಂಕಗೊಂಡಿರುವ ಉನ್ನತಾಧಿಕಾರಿಗಳು ಸದ್ಯದ ಸಂಕಷ್ಟಕ್ಕೆ ನಿರೀಕ್ಷಿತ ಹಣ ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇದರ ಬದಲು ಕೇಂದ್ರದ ನೆರವು ಮತ್ತು ದಾನಿಗಳ ನೆರವಿನಲ್ಲೇ ಕೊರೋನಾ ಸಂಕಷ್ಟವನ್ನು ಎದುರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು ಇದನ್ನು ಹೊರತುಪಡಿಸಿ ಅಲ್ಪಪ್ರಮಾಣದ ಹಣವನ್ನಷ್ಟೇ ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಬೇಕು ಎಂದು ಹೇಳಿದೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯ ಸಲುವಾಗಿ ಮಾಸಿಕ ಮೂರು ಸಾವಿರ ಕೋಟಿ ರೂಗಳಷ್ಟು ಹಣ ಬೇಕಿದ್ದು ವಿವಿಧ ಬಾಬ್ತುಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಹಣದ ಪ್ರಮಾಣ ಇಳಿಮುಖವಾಗಿದೆ.
ಲಾಕ್ ಡೌನ್ ಪರಿಸ್ಥಿತಿಯಿಂದ ರಾಜ್ಯ ಮಾತ್ರವಲ್ಲ, ದೇಶಕ್ಕೆ ದೇಶವೇ ಸಂಕಷ್ಟದಲ್ಲಿರುವುದರಿಂದ ಕೇಂದ್ರದಿಂದ ನಮಗೆ ದೊರೆಯಬೇಕಾದ ಹಣದಲ್ಲೂ ದೊಡ್ಡ ಪಾಲು ಸಿಗದೆ ಹೋಗಬಹುದು.ಹೀಗಾಗಿ ಪರ್ಯಾಯ ಮೂಲಗಳಿಂದ ಹಣ ಪಡೆಯಲು ಪ್ರಯತ್ನಿಸಬೇಕು. ಕೇಂದ್ರದ ನೆರವು ಪಡೆಯುವುದು ಸೇರಿದಂತೆ ಉದ್ಯಮಿಗಳಿಂದ, ದಾನಿಗಳಿಂದ ನೆರವು ಪಡೆಯಬೇಕು. ಹಾಗೆ ಮಾಡದೆ ಸರ್ಕಾರದ ಬೊಕ್ಕಸವನ್ನು ನೆಚ್ಚಿಕೊಂಡರೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಇದು ಯಾವ ಮಟ್ಟಕ್ಕೆ ಹೋಗಬಹುದು ಎಂದರೆ ರಾಜ್ಯ ಸರ್ಕಾರಿ ನೌಕರರ ವೇತನ,ಪಿಂಚಣಿ ಹಣವನ್ನು ಕೊಡಲೂ ಪರದಾಡುವ ಸ್ಥಿತಿಯನ್ನು ತರಬಹುದು. ಈ ಹಿಂದೆ ಸರ್ಕಾರಿ ನೌಕರರ ವೇತನ,ಪಿಂಚಣಿ ನೀಡಲು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ ಎಂಬುದು ನಿಜ. ಹಾಗೆಯೇ ದೇವಾಲಯಗಳ ಹುಂಡಿಯಿಂದ ಹಣ ಪಡೆಯಲಾಗಿದೆ ಎಂಬುದೂ ನಿಜ. ಆದರೆ ಆ ಸಂದರ್ಭದಲ್ಲಿ ಸರ್ಕಾರಗಳು ಇಂತಹ ನೈಸರ್ಗಿಕ ಸಮಸ್ಯೆಗೆ ಗುರಿಯಾಗಿರಲಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕಿರುವ ಹರಿವು ಕಡಿಮೆಯಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಈ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಈ ಮಧ್ಯೆ ಕೊರೋನಾ ವಿರುದ್ಧ ಹೋರಾಟ ನಡೆಸಲು ಕೈಗೊಂಡ ಹಲವು ತೀರ್ಮಾನಗಳಿಗೆ ಅಗತ್ಯವಾದ ಹಣದ ನೆರವನ್ನು ಪಡೆಯಲಾಗದೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.