ಕಾಲುವೆಯಲ್ಲಿ ಕಾಲು ಜಾರಿ ಉಪನ್ಯಾಸಕನ ಸಾವು

ಕೆ.ಆರ್.ಪೇಟೆ, ನ 4:   ಸ್ನಾನ ಮಾಡಲು ನಾಲೆಗೆ ಇಳಿದಿದ್ದ ಉಪನ್ಯಾಸಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿ ವರದಿಯಾಗಿದೆ.   ಚನ್ನರಾಯಪಟ್ಟಣ ತಾಲ್ಲೂಕಿನ ಸಾಹುಕಾರ್ ಚನ್ನಯ್ಯ ನಾಲೆಯಲ್ಲಿ ಸ್ನಾನ ಮಾಡುತ್ತಿದ್ದ ಮದ್ದೂರು ತಾಲ್ಲೂಕು ಆನೆದೊಡ್ಡಿಯ ಎಂ.ಬಿ.ತುಳಸೀಪ್ರಸಾದ್ (32) ನೀರಿನಲ್ಲಿ ಮುಳುಗಿ ಮೃತಪಟ್ಟ ದುದರ್ೆವಿ. ಪತ್ನಿ ಗುಣಶ್ರೀ ಮತ್ತು ಮೂರು ವರ್ಷದ ಮಗಳು ತನ್ವಿಪ್ರಸಾದ್ ಅವರನ್ನು ಅಗಲಿದ್ದಾರೆ.  ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿ ಭೈರಾಪುರ ಬಳಿ ಕಾಲುವೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಮೃತದೇಹವನ್ನು ಪೊಲೀಸರು ನೀರಿನಿಂದ ತೆಗೆದು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ  ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಿದರು.  ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತುಳಸೀಪ್ರಸಾದ್ ರಜೆಗೆಂದು ತನ್ನ ಸಹೋದರಿಯ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ತುಳಸೀಪ್ರಸಾದ್ ಅವರ ಮಾವ ಶ್ರೀನಿವಾಸ್ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.