ಬಾಕಿ ವೇತನ, ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ 7ನೇ ದಿನಕ್ಕೆ

ಬಾಕಿ ವೇತನ, ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ 7ನೇ ದಿನಕ್ಕೆ  Day-night protest demanding pending wages and appointment orders enters 7th day

ಲೋಕದರ್ಶನ ವರದಿ 

ಶಿಗ್ಗಾವಿ   17:  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಬಾಕಿ ವೇತನ ಬಿಡುಗಡೆ ಮತ್ತು ನೇಮಕಾತಿ ಆದೇಶ ಪತ್ರ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ 7ನೇ ದಿನಕ್ಕೆ ಕಾಲಿಟ್ಟಿದೆ.    2024ಹಿ25 ಹಾಗೂ 2025ಹಿ26ನೇ ಶೈಕ್ಷಣಿಕ ವರ್ಷಗಳ ಹಲವು ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.

ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.   ವಿಶ್ವವಿದ್ಯಾಲಯದ ಆಡಳಿತ ವರ್ಗಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ ನಡೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾನಿರತರು ತಿಳಿಸಿದರು.  

ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.   ಧರಣಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್‌.ಎಸ್‌.) ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.   

ಇದೇ ವೇಳೆ ವಿವಿಧ ಸಂಘಹಿಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ ನೈತಿಕ ಬೆಂಬಲ ಸೂಚಿಸಿದರು. ಬಾಕಿ ವೇತನ ಪಾವತಿ ಹಾಗೂ ನೇಮಕಾತಿ ಆದೇಶ ಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಇನ್ನಷ್ಟು ವಿಳಂಬ ಮಾಡದೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.   ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿದಿದ್ದು, ಬೇಡಿಕೆಗಳು ಈಡೇರುವವರೆಗೆ ಅಹೋರಾತ್ರಿ ಧರಣಿ ನಿರಂತರವಾಗಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.