ದಾವಣಗೆರೆಯ ಮಹಿಳೆ ಕೊರೋನಾ ಸೋಂಕಿಗೆ ಬಲಿ, 700ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು, ಮೇ 7,ದಾವಣಗೆರೆಯ 55 ವರ್ಷದ ಮಹಿಳೆಯೋರ್ವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ರಕ್ತದೊತ್ತಡದ ಕಾಯಿಲೆಯಿಂದ ಕೂಡ ಬಳಲುತ್ತಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31ಕ್ಕೇರಿಕೆಯಾಗಿದೆ. ಇದರ ಬೆನ್ನಲ್ಲೇ ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದವರೆಗೆ 8 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 701ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 363 ಜನರು ಗುಣಮುಖರಾಗಿದ್ದಾರೆ. ದಾವಣಗೆರೆಯಲ್ಲಿ ಇಂದು ಮೃತಪಟ್ಟ 55 ವರ್ಷದ ಮಹಿಳೆ, ಜ್ವರದ ಲಕ್ಷಣಗಳನ್ನು ಹೊಂದಿದ್ದ 53 ಹಾಗೂ 40 ವರ್ಷದ ಮಹಿಳೆಯರು, ಕಲಬುರಗಿಯಲ್ಲಿ ಸೋಂಕಿತರ ಸಂಪರ್ಕ ಹೊಂದಿದ್ದ 35  ಹಾಗೂ 36 ವರ್ಷದ ವ್ಯಕ್ತಿಗಳು, ಬೆಳಗಾವಿಯ ಹಿರೇಬಾಗೇವಾಡಿಯ 13 ವರ್ಷದ ಬಾಲಕಿ, ಬೆಂಗಳೂರು ನಗರದ 49 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.