ದೇಶದಲ್ಲಿ ಆಹಾರ ಧಾನ್ಯಗಳ ಅಗತ್ಯ ಸಂಗ್ರಹ- ಎಫ್‌ಸಿಐ ನಿರ್ದೇಶಕ ಡಿ ವಿ ಪ್ರಸಾದ್‍

ಬೆಂಗಳೂರು, ಏಪ್ರಿಲ್ 12,ದೇಶದಲ್ಲಿ 301.73 ಲಕ್ಷ ಟನ್ ಅಕ್ಕಿ ಮತ್ತು 236.46 ಲಕ್ಷ ಟನ್ ಗೋಧಿ ಸೇರಿದಂತೆ 538.19 ಲಕ್ಷ ಟನ್ ಆಹಾರ ಧಾನ್ಯಗಳ ಸಂಗ್ರಹವಿದೆ ಎಂದು ಭಾರತದ ಆಹಾರ ನಿಗಮ (ಎಫ್‌ಸಿಐ) ವ್ಯವಸ್ಥಾಪಕ ನಿರ್ದೇಶಕ ಡಿ ವಿ ಪ್ರಸಾದ್ ತಿಳಿಸಿದ್ದಾರೆ.ಲಾಕ್‌ಡೌನ್ ಘೋಷಣೆಯಾದಾಗಿನಿಂದ ಎಫ್‌ಸಿಐ 87 ರೈಲು ಲೋಡ್‌ಗಳ ಮೂಲಕ ಸುಮಾರು 2.44 ಲಕ್ಷ ಟನ್ ಆಹಾರ ಧಾನ್ಯಗಳನ್ನು ಕರ್ನಾಟಕಕ್ಕೆ ಪೂರೈಕೆ ಮಾಡಿದೆ.ಇದರಿಂದಾಗಿ ಸುಮಾರು ನಾಲ್ಕು ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.ಲಾಕ್‍ಡೌನ್‍ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು 2.76 ಲಕ್ಷ ಟನ್ ಅಕ್ಕಿ ಮತ್ತು 43 ಸಾವಿರ ಟನ್ ಗೋಧಿ ಬಿಡುಗಡೆ ಮಾಡಲಾಗಿದೆ.ಬೇಯಿಸಿದ ಆಹಾರವನ್ನು ಪೂರೈಸುತ್ತಿರುವ ದತ್ತಿ ಸಂಸ್ಥೆಗಳಿಗೆ  ಮತ್ತು ಎನ್‌ಜಿಒಗಳಿಗೆ ಸಬ್ಸಿಡಿ ದರದಲ್ಲಿ ಪ್ರತಿ ಕೆಜಿ ಅಕ್ಕಿಗೆ 22ರೂ. ದರದಲ್ಲಿ ಮತ್ತು ಪ್ರತಿ ಕೆಜಿ ಗೋಧಿಗೆ 21ರೂ ದರದಲ್ಲಿ ಆಹಾರ ಧಾನ್ಯ ಪೂರೈಸಲು ಹೊಸ ಫಲಾನುಭವಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಸಾದ್ ಹೇಳಿದರು.