ಬಸ್ ತಂಗುದಾಣ ಮತ್ತು ರಸ್ತೆ ಅಗಲೀಕರಣಕ್ಕೆ ಡಿಎಸ್‌ಎಸ್ ಆಗ್ರಹ

ಬಸ್ ತಂಗುದಾಣ ಮತ್ತು  ರಸ್ತೆ ಅಗಲೀಕರಣಕ್ಕೆ ಡಿಎಸ್‌ಎಸ್ ಆಗ್ರಹ DSS demands bus stand and road widening

ಲೋಕದರ್ಶನ ವರದಿ 

ಕಂಪ್ಲಿ 22: ಈಗಾಗಲೇ ಬೇಸಿಗೆಯ ಬಿರು ಬಿಸಿಲು ಆರಂಭಗೊಂಡಿದ್ದು, ಕಂಪ್ಲಿ ಪಟ್ಟಣದ ಆಂಬೇಡ್ಕರ್ ವೃತ್ತದ ಹೊಸಪೇಟೆ ಬಸ್ ನಿಲ್ಲಿಸುವ ಸ್ಥಳದಲ್ಲಿ ಬಸ್ ತಂಗುದಾಣ ನಿರ್ಮಿಸಿ, ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ದಲಿತ ಸಂಘರ್ಷ ಸಮಿತಿ(ಬುದ್ಧ, ಬಸವ, ಅಂಬೇಡ್ಕರ್ ವಾದ)ಯ ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಆಗ್ರಹಿಸಿದರು. ಅವರು ಪಟ್ಟಣದಲ್ಲಿ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, 22ನೇ ವಾರ್ಡಿನಲ್ಲಿ ಶೌಚಾಲಯ ದುರ್ನಾತ ಬೀರುತ್ತಿದ್ದು,

ಇದರಿಂದ ಮಹಿಳೆಯರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಶೌಚಾಗೃಹಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನೆ ಇಲ್ಲ. ಆದ್ದರಿಂದ ಪುರಸಭೆ ಅಧಿಕಾರಿಗಳು ಎಚ್ಚವಹಿಸಿ, ಶೌಚಾಗೃಹ ದುರಸ್ಥಿಗೊಳಿಸಿ, ಸ್ವಚ್ಚತೆಯೊಂದಿಗೆ ಅನುಕೂಲ ಮಾಡಿಕೊಡಬೇಕು. ಸಾಕಷ್ಟು ಪ್ರಯಾಣಿಕರು ಅಂಬೇಡ್ಕರ್ ವೃತ್ತದ ಇಡ್ಲಿ ಬಂಡಿಗಳ ಬಳಿಯಲ್ಲಿ ಬಿಸಿಲಿನಲ್ಲೇ ನಿಂತು,

ಪ್ರಯಾಣಿಸಬೇಕಾದ ಸಂಕಷ್ಟ ಎದುರಾಗಿದೆ. ಕುರುಗೋಡು ಬಸ್ ನಿಲ್ಲಿಸುವ ಸ್ಥಳದಲ್ಲಿಯೂ ಸಹ ನೆರಳು ಇಲ್ಲದೇ ಉರಿ ಬಿಸಿಲಿನಲ್ಲಿ ವಾಹನಗಳನ್ನು ಕಾಯಬೇಕಾಗಿದೆ. ಆದ್ದರಿಂದ ಇಲ್ಲಿನ ಎರಡು ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು. ನಂತರ ತಾಲೂಕು ಅಧ್ಯಕ್ಷ ಬಸವರಾಜ ಮಾತನಾಡಿ, ಪಟ್ಟಣದಲ್ಲಿ ಸರಿಯಾಗಿ ಬೀದಿ ದೀಪಗಳು ಇಲ್ಲದ ಪರಿಣಾಮ ಕತ್ತಲಿನಲ್ಲೇ ಜನರು ಜೀವನ ನಡೆಸುವಂತಾಗಿದೆ.

ಕೆಲವೊಂದು ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಪಟ್ಟಣದ ಮಾರೆಮ್ಮ ದೇವಸ್ಥಾನ ಬಳಿಯ ಇಳಿ ಜಾರಿನಲ್ಲಿರುವ ರಸ್ತೆಯೂ ಕಿರಿದಾಗಿದ್ದು, ಮತ್ತು ಇಲ್ಲಿನ ಅಕ್ಕಪಕ್ಕದಲ್ಲಿ ತರಕಾರಿ ಬಂಡಿಗಳು ರಾಜರೋಷವಾಗಿ ಜಮಾವಣಿಯಾಗುತ್ತಿದ್ದು, ಇದರಿಂದ ಟ್ರಾಫಿಕ್ ಆಗುವ ಜೊತೆಗೆ ಜನರ ಸುಗಮ ಸಂಚಾರಕ್ಕೆ ತುಂಬ ಸಮಸ್ಯೆ ಉಂಟಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಇಲ್ಲಿನ ರಸ್ತೆ ಅಗಲೀಕರಣ ಮಾಡಬೇಕು.

ಮತ್ತು ತಳ್ಳುವ ತರಕಾರಿ ಬಂಡಿಗಳನ್ನು ಸಂತೆ ಮಾರುಕಟ್ಟೆಗೆ ಸ್ಥಳಾಂತರಿಸಿ, ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತೆ ಮಾಯವಾಗಿದೆ. ಮತ್ತು ಇಲ್ಲಿನ ರೋಗಿಗಳಿಗೆ ಬೇಕಾಬಿಟ್ಟಿನಲ್ಲಿ ಆರೈಕೆ ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಹಕ್ಕೋತ್ತಾಯಿಸಿದರು.