ಕಸ ಹಾಕಬೇಡಿ ಎಂದಿದ್ದಕ್ಕೆ ನಾಯಿ ಛೂ ಬಿಟ್ಟ ವ್ಯಕ್ತಿ

ಬೆಂಗಳೂರು, ಮಾ. 3, ಅಪಾರ್ಟ್ ಮೆಂಟ್ ಬಳಿ ಕಸ ಹಾಕಬೇಡಿ ಎಂದಿದ್ದಕ್ಕೆ ವ್ಯಕ್ತಿಯೋರ್ವ, ಸೆಕ್ಯೂರಿಟಿ ಗಾರ್ಡ್ ಮೇಲೆನಾಯಿಯ ಮೂಲಕ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ಸುರೇಶ್ ಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಪಕ್ಕದ ಮನೆ ಮಾಲೀಕ ಸುರೇಶ್ ದಾಸಪ್ಪ ಎಂಬುವವರು ಕಸ ಎಸೆಯುವ ವಿಚಾರದಲ್ಲಿ ತಮ್ಮ ಮನೆಯ ಪಕ್ಕದ ಅಪಾರ್ಟ್ ಮೆಂಟ್ ನ ಸೆಕ್ಯುರಿಟಿಯೊಂದಿಗೆ ಜಗಳ ಮಾಡಿಕೊಂಡಿದ್ದಾರೆ.ಸುರೇಶ್ ದಾಸಪ್ಪ, ಅಪಾರ್ಟ್ ಮೆಂಟ್ ನ ಪಕ್ಕದಲ್ಲಿರುವ ಖಾಲಿ ಸೈಟ್ನಲ್ಲಿ ಕಸ ಹಾಕುತ್ತಿದ್ದರು. ಹೀಗಾಗಿ ಖಾಲಿ ಜಾಗದಲ್ಲಿಕಸ ಹಾಕಬೇಡಿ ಎಂದು ಸೆಕ್ಯೂರಿಟಿ ಸುರೇಶ್ ಮೂರ್ತಿ ಅವರಿಗೆ ಈ ಹಿಂದೆಯೇ ಸೂಚಿಸಿದ್ದರು.ಆದರೂ, ಸುರೇಶ್ ಸೋಮವಾರ ರಾತ್ರಿಯು ಮತ್ತೆ ಕಸದ ರಾಶಿಯನ್ನು ತಂದು ಹಾಕಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸುರೇಶ್ ಅವರು ತಮ್ಮ ನಾಯಿಯನ್ನು ಛೂ ಬಿಟ್ಟು ರಸ್ತೆಯಲ್ಲಿಯೇ ನಾಯಿಯಿಂದ ಕಚ್ಚಿಸಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಆರೋಪಿಸಿದ್ದಾರೆ. ಬಲಗೈಗೆ ಗಂಭೀರ ಗಾಯಗೊಂಡಿರುವ ಸುರೇಶ್ ಮೂರ್ತಿ ಅವರನ್ನು ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.