ಸಿಜೆಪಿ ಪ್ರತಿಭಟನೆ ಹಿನ್ನೆಲೆ: 16 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದ ಡಿಎಂಆರ್‌ಸಿ

ಸಿಜೆಪಿ ಪ್ರತಿಭಟನೆ ಹಿನ್ನೆಲೆ: 16 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದ ಡಿಎಂಆರ್‌ಸಿ DMRC Closes 16 Metro Stations Amid Ongoing CJP Protests in Delhi

ನವದೆಹಲಿ, ಜುಲೈ 23: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆ ಹಾಗೂ ಬಿಗಿ ಭದ್ರತಾ ಕ್ರಮಗಳ ಹಿನ್ನೆಲೆಯಲ್ಲಿ, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಗುರುವಾರ ಬೆಳಿಗ್ಗೆ 7.30ರಿಂದ ಮುಂದಿನ ಆದೇಶದವರೆಗೆ 16 ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಿದೆ.

ಬೆಳಿಗ್ಗೆ 6.55ಕ್ಕೆ ಹೊರಡಿಸಿದ ಪ್ರಕಟಣೆಯಲ್ಲಿ, ಲೋಕ ಕಲ್ಯಾಣ ಮಾರ್ಗ್, ರಾಜೀವ್ ಚೌಕ್, ಪಟೇಲ್ ಚೌಕ್, ರಾಮಕೃಷ್ಣ ಆಶ್ರಮ ಮಾರ್ಗ್, ಬರಾಖಂಬಾ ರೋಡ್, ಸುಪ್ರೀಂ ಕೋರ್ಟ್, ಸೇವಾ ತೀರ್ಥ, ಜನಪಥ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟೇರಿಯಟ್, ಐಟಿಒ, ದೆಹಲಿ ಗೇಟ್, ಇಂದ್ರಪ್ರಸ್ಥ, ಖಾನ್ ಮಾರ್ಕೆಟ್, ಜೋರ್ ಬಾಗ್ ಹಾಗೂ ಶಿವಾಜಿ ಸ್ಟೇಡಿಯಂ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಿಎಂಆರ್‌ಸಿ ತಿಳಿಸಿದೆ.

ಆದಾಗ್ಯೂ, ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯ ಎಂದಿನಂತೆ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬುಧವಾರ ರಾತ್ರಿ ಸಂಸದ್ ಮಾರ್ಗ್‌ನಲ್ಲಿ, ಪ್ರತಿಭಟನಾ ಸ್ಥಳದಿಂದ ದೂರವಿರುವ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಸಿಜೆಪಿ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಡಿಎಂಆರ್‌ಸಿ ತಿಳಿಸಿದೆ.