ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅನ್ಬಝಗನ್ ನಿಧನ

ಚೆನ್ನೈ, ಮಾ.7, ಕಳೆದ 43 ವರ್ಷಗಳಿಂದ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಅನ್ಬಝಗನ್ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.ನಾಲ್ಕು ಬಾರಿ ಸಚಿವರಾಗಿದ್ದ ಅವರು, ಸಮಾಜ ಸುಧಾಕರ ಪೆರಿಯಾರ್ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಆಪ್ತರಾಗಿದ್ದರು. ಇಬ್ಬರು ಪುತ್ರಿಯರು, ಓರ್ವ ಪುತ್ರ, ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 9 ಬಾರಿ ಶಾಸಕರಾಗಿ, ಒಂದು ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಕೆ.ಅನ್ಬಝಗನ್ ಅವರ ನಿಧನದ ಹಿನ್ನೆಲೆಯಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಒಂದು ವಾರ ಕಾಲ ಶೋಕಾಚರಣೆ ಪ್ರಕಟಿಸಿದ್ದು, ಈ ಸಂದರ್ಭದಲ್ಲಿ ಪಕ್ಷದ ಧ್ವಜವನ್ನು ಅರ್ಧದವರೆಗೆ ಏರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ದ್ರಾವಿಡ ಚಳವಳಿಯ ಪ್ರಮುಖರಲ್ಲಿ ಒಬ್ಬರಾದ ಕೆ.ಅನ್ಬಝಗನ್ ಅವರನ್ನು ಫೆಬ್ರವರಿ 24 ರಂದು ಚೆನ್ನೈನ ಅಪೊಲೊ ಆಸ್ಪತ್ರೆಗೆ ವಯೋಮಾನ ಸಹಜ ಕಾಯಿಲೆಗಳ ಕಾರಣದಿಂದ ದಾಖಲಿಸಲಾಯಿತು. ಶಿಕ್ಷಣ ತಜ್ಞ, ರಾಜಕಾರಣಿಯಾಗಿದ್ದ ಅವರು ಮೇ 1977 ರಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.ಅವರ ನಿಧನಕ್ಕೆ ತಮಿಳುನಾಡಿನ ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.