ಚಿಕ್ಕಬಳ್ಳಾಪುರ, ಏ.14, ತಾವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾದರಿಯಲ್ಲಿ ಕೀಳು ರಾಜಕೀಯ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.ಸುಧಾಕರ್ ಅವರು ತಮ್ಮ ನಿವಾಸದಲ್ಲಿರುವ ಈಜುಕೊಳದಲ್ಲಿ ಭಾನುವಾರ ಮಕ್ಕಳೊಂದಿಗೆ ಈಜಾಟವಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದರು.ಅದಕ್ಕೆ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ, ಕರೋನಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಸಮಯ ಕಳೆಯುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದು ನೈತಿಕತೆಯ ವಿಚಾರ. ಸುಧಾಕರ್ ಅವರು ಸ್ವ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿ ಅವರು ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದರು.ಇದಕ್ಕೆ ಇಂದಿಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸುಧಾಖರ್, ತಮಗೆ ಈವರೆಗೆ ಡಿ.ಕೆ.ಶಿವಕುಮಾರ್ ಅವರ ಸದ್ಗುಣಗಳು ಮಾತ್ರ ಗೊತ್ತಿತ್ತು. ಆದರೆ, ಅವರ ದೊಡ್ಡ ಗುಣ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.ಟ್ವೀಟ್ ವಿವಾದ ಸೃಷ್ಟಿಸುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಸುಧಾಕರ್ ಅವರು ಅದನ್ನು ತಮ್ಮ ಖಾತೆಯಿಂದ ಅಳಿಸಿ ಹಾಕಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಪಿಸಿಸಿ ಕೂಡ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸುಧಾಕರ್ ವಜಾಗೊಳಿಸಲು ಒತ್ತಾಯಿಸಿತ್ತು.