ಸೆ.1ರಂದು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಡಿಕೆಶಿ ಭೇಟಿ

ಸೆ.1ರಂದು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಡಿಕೆಶಿ ಭೇಟಿ  DKSH to visit Muktimandira Dharmakshetra on September 1


ಲಕ್ಷ್ಮೇಶ್ವರ   30: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.1ರಂದು ಲಕ್ಷ್ಮೇಶ್ವರ ಸಮೀಪದ ಭೂಕೈಲಾಸ ಎಂದೇ ಪ್ರಸಿದ್ಧವಾಗಿರುವ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಅಧಿಕಾರ ವಹಿಸಿಕೊಂಡ ಬಳಿಕ ಅವರು ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಭಕ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.  

1932ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು (ವೀರಗಂಗಾಧರ ಅಜ್ಜಯ್ಯನವರು) ಮುಕ್ತಿಮಂದಿರ ಧರ್ಮಕ್ಷೇತ್ರವನ್ನು ಸ್ಥಾಪಿಸಿದ್ದರು. 1932ರಿಂದ 1947ರವರೆಗೆ ಅವರು ಇದೇ ಕ್ಷೇತ್ರದಲ್ಲಿ ನೆಲೆಸಿದ್ದರು. ಬಳಿಕ ರಂಭಾಪುರಿ ಪೀಠದ ಜಗದ್ಗುರುಗಳಾಗಿ ಸೇವೆ ಸಲ್ಲಿಸಿದ ಅವರು, ತಮ್ಮ ಅಂತಿಮ ವಿಶ್ರಾಂತಿ ಜೀವನವನ್ನೂ ಮುಕ್ತಿಮಂದಿರದಲ್ಲೇ ಕಳೆದರು.  

ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿರುವ ವೀರಗಂಗಾಧರ ಅಜ್ಜಯ್ಯನವರ ಐಕ್ಯ ಗದ್ದುಗೆ ಭಕ್ತರ ಆರಾಧನಾ ಕೇಂದ್ರವಾಗಿದೆ. ಅಜ್ಜಯ್ಯನವರು ಕಂಡಿದ್ದ ತ್ರಿಕೋಟಿ   ಕೋಟಿ ಶಿವಲಿಂಗಗಳ ಪ್ರತಿಷ್ಠಾಪನೆ ಸಂಕಲ್ಪದಂತೆ ಕ್ಷೇತ್ರದಲ್ಲಿ ಸಹಸ್ರಾರು ಶಿವಲಿಂಗಗಳ ಸ್ಥಾಪನಾ ಕಾರ್ಯ ಭಕ್ತರ ಸಹಕಾರದೊಂದಿಗೆ ಮುಂದುವರಿದಿದೆ.  

ಕ್ಷೇತ್ರದಲ್ಲಿ ಪ್ರತಿದಿನ ಪೂಜೆ, ಅಮಾವಾಸ್ಯೆ ಪೂಜೆ, ಶ್ರಾವಣ ಮಾಸದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನಗಳು ಹಾಗೂ ಉಚಿತ ಅನ್ನದಾಸೋಹ ನಡೆಯುತ್ತಿವೆ. ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶದೊಂದಿಗೆ ಸಮಾನತೆಯ ಕಾರ್ಯಗಳೂ ನಡೆಯುತ್ತಿವೆ.  

ಪ್ರಸ್ತುತ ಕ್ಷೇತ್ರದ ಪೀಠಾಧಿಪತಿಗಳಾಗಿ ಶ್ರೀ ಷ.ಬ್ರ. ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸೇವೆ ಸಲ್ಲಿಸುತ್ತಿದ್ದು, ಹಿರಿಯ ಗುರುಗಳ ಆಶಯದಂತೆ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.  

ಶ್ರೀ ವೀರಗಂಗಾಧರ ಅಜ್ಜಯ್ಯನವರ ಮೇಲೆ ಅಪಾರ ಭಕ್ತಿ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯಕ್ಕೆ ಹೆಚ್ಚಿನ ಅನುದಾನ ನೀಡಿ ತಮ್ಮ ಅಧಿಕಾರಾವಧಿಯಲ್ಲೇ ಯೋಜನೆಯನ್ನು ಪೂರ್ಣಗೊಳಿಸಿ ಉದ್ಘಾಟಿಸಬೇಕು ಎಂಬ ಆಶಯವನ್ನು ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತ ವೀರಣ್ಣ ಪವಾಡದ ಮತ್ತು ರಾಜಕೀಯ ಮುಖಂಡ, ಹಿರಿಯ ಹಾಗೂ ಆಧ್ಯಾತ್ಮಿಕ ಮುಖಂಡ ಸೋಮಣ್ಣ ಡಾಣಗಲ್ ವ್ಯಕ್ತಪಡಿಸಿದ್ದಾರೆ.