ಈದ್-ಎ-ಮಿಲಾದ್ ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಡಿಸಿ ಕರೆ
DC calls to celebrate Eid-e-Milad with peace and harmony
ಬೆಳಗಾವಿ 22: ಈದ್-ಎ-ಮಿಲಾದ್ ಹಬ್ಬವನ್ನು ಕಳೆದ ಸಾಲಿನಂತೆ ಈ ಬಾರಿಯೂ ಶಾಂತಿ, ಸೌಹಾರ್ದತೆ ಹಾಗೂ ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಶನಿವಾರ (ಆ.22) ನಡೆದ ಈದ್-ಎ-ಮಿಲಾದ್ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮೆರವಣಿಗೆಯಲ್ಲಿ ಡಿ.ಜೆ. ಸಂಪೂರ್ಣ ನಿಷೇಧ ಮಾಡಲಾಗಿದ್ದು, ಈ ಕುರಿತು ಯುವಜನರಿಗೆ ಸಮಾಜದ ಮುಖಂಡರು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.
ಮೆರವಣಿಗೆ ಮಾರ್ಗ ಹಾಗೂ ನಗರದ ವಿವಿಧೆಡೆ ಕೈಗೊಳ್ಳುವ ಅಲಂಕಾರಗಳಿಂದ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಸ್ಕಾಂ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮೆರವಣಿಗೆ ಸಾಗುವ ರಸ್ತೆಗಳ ದುರಸ್ತಿ ಕೈಗೊಳ್ಳಬೇಕು. ಮೆರವಣಿಗೆಯನ್ನು ಸಂಜೆ 6 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಸಕ ರಾಜು (ಆಸೀಫ್) ಸೇಠ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಈದ್-ಎ-ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಕಳೆದ ಬಾರಿ ನೀಡಿದ ಸಹಕಾರವನ್ನು ಈ ಬಾರಿಯೂ ಮುಂದುವರಿಸುವಂತೆ ಮನವಿ ಮಾಡಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಿ, ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಪೊಲೀಸ್ ಆಯುಕ್ತ ಭೋರಸೆ ಭೂಷಣ ಗುಲಾಬರಾವ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಮಾಜದ ಮುಖಂಡರಿಂದ ಪೊಲೀಸ್ ಇಲಾಖೆಗೆ ಉತ್ತಮ ಸಹಕಾರ ದೊರೆತಿದೆ. ಈ ಬಾರಿಯೂ ಅದೇ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಪ್ರಚೋದನಾತ್ಮಕ ಅಲಂಕಾರ, ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಅಳವಡಿಸಬಾರದು. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸುತ್ತಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಮಾಜದ ಮುಖಂಡರು ಈದ್-ಎ-ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಬಸರಗಿ, ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ.ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 