ಗಣಿಗಾರಿಕೆಯಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕ್ರಮ

ಗಣಿಗಾರಿಕೆಯಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕ್ರಮ  DC Sangappa's instructions at the district-level taskforce and sand monitoring committee meeting

ಜಿಲ್ಲಾ ಮಟ್ಟದ ಟಾಸ್ಕಪೋರ್ಸ, ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿಸಿ ಸಂಗಪ್ಪ ಸೂಚನೆ 

ಬಾಗಲಕೋಟೆ: ಜಿಲ್ಲೆಯಲ್ಲಿ ಈಗಾಗಲೇ ಅನುಮತಿ ಪಡೆದ ಮರಳು ಗಣಿಗಾರಿಕೆ, ಗ್ರಾನೈಟ್ ಕಲ್ಲುಗಣಿ, ಕಲ್ಲು ಪುಡಿ ಮಾಡುವ ಘಟಕಗಳು, ಸಾಗಾಣಿಕೆಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರೀಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಜಿಲ್ಲಾ ಟಾಸ್ಕಪೋರ್ಸ (ಗಣಿ) ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸನ್ಸ್‌ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೊದಲು ಪರಾನಿಗೆ ನೀಡಿದ ಘಟಕಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ ಹಾಗೂ ತಹಶೀಲ್ದಾರ ಸೇರಿ ಜಂಟಿಯಾಗಿ ಪರೀಶೀಲನೆ ನಡೆಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲವೇ ಅನುಮತಿ ರದ್ದುಪಡಿಸಲು ಮುಂದಾಗಬೇಕು ಎಂದರು. 

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕಾ ಸಮಿತಿಗಳಿಂದ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನುಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಪರೀಶೀಲಿಸಲಾಗಿ ಪತ್ತೆ ಹಚ್ಚಿದ ಪ್ರಕರಣಗಳ ಸಂಖ್ಯೆ 9 ಇದೆ. ಆದರೆ ಅವರ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಮೇಲೆ ಕೇವಲ ದಂಡ, ನೋಟಿಸ್ ಕೊಟ್ಟರೆ ಸಾಲದು ಪ್ರಕರಣ ದಾಖಲಿಸಬೇಕು. ಅಲ್ಲದೇ ಮರಳು ಗಣಿಗಾರಿಕೆ ಪರವಾನಿಗೆ ಬಂದ ಅರ್ಜಿಗಳನ್ನು ಸೂಕ್ತ ಪರೀಶೀಲನೆ ನಂತರ ಅನುಮತಿ ನೀಡುವ ಕೆಲಸವಾಗಬೇಕು ಎಂದರು.  

ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ಕೋರಿ ಬಂದ ಅರ್ಜಿಗಳಲ್ಲಿ ನಿಯಮಾನುಸಾರ ಇದ್ದಲ್ಲಿ ಮಾತ್ರ ಅನುಮತಿ ನೀಡಬೇಕು. ಈ ಬಗ್ಗೆ ಅರ್ಜಿಗಳನ್ನು ಪರೀಶೀಲಿಸಿ, ನಂತರ ಘಟಕಗಳ ಸ್ಥಳಕ್ಕೂ ಸಹ ಭೇಟಿ ಸರಿಯಾಗಿದ್ದಲ್ಲಿ ಮಾತ್ರ ಪರವಾನಿಗೆ ನೀಡುವ ಕೆಲಸವಾಗಬೇಕು. ಪರವಾನಿಗೆ ನೀಡುವಾಗ ಎಲ್ಲವನ್ನು ಪರೀಶೀಲನೆ ಮಾಡಬೇಕು. ಪರವಾನಿಗೆ ನೀಡಿದ ನಂತರ ಸಮಸ್ಯೆಯಾಗುವದನ್ನು ತಪ್ಪಿಸಲು ಮೊದಲ ಹಂತದಲ್ಲಿಯೇ ಸೂಕ್ರ ಪರೀಶೀಲನೆ ಅಗತ್ಯವಾಗಿದೆ ಎಂದು ಜಿ.ಪಂ ಸಿಇಓ ಶಶಿಧರ ಕುರೇರ ಜಿಲ್ಲಾಧಿಕಾರಿಗಳ ಜೊತೆ ಧ್ವನಿ ಗೂಡಿಸಿದರು. 

ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್‌ ನೀಡುವ, ಅವಧಿ ವಿಸ್ತರಿಸುವ ಕುರಿತು ಬಂದ ಅರ್ಜಿಗಳನ್ನು ಪರೀಶೀಲಿಸಿ ಫಾರಂ-ಸಿ ವಿತರಿಸುವ ಕೆಲಸವಾಗಬೇಕು. ಅಲ್ಲದೇ ಘಟಕ ಸ್ಥಾಪನೆ ಮಾಡುವ ಜಮೀನು ಎನ್‌.ಎ ಆಗಿರಬೇಕು. ಆಗದಿದ್ದಲ್ಲಿ ಅನುಮತಿಯನ್ನು ನೀಡಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮರಳು ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಅನುಮತಿ ಇಲ್ಲದ ವಾಹನಗಳ ಮೇಲೆ ಕ್ರಮವಹಿಸಲು ಸೂಚಿಸಿದರು.  

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಷಣ್ಮುಖ ಡಿ.ಎಚ್, ಜಿಲ್ಲಾ ಪರಿಸರ ಅಧಿಕಾರಿ ಅನಿಕುಮಾರ ಚಳಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.