ಕೃಷಿ ಇಲಾಖೆ ಅಧಿಕಾರಿ, ರೈತರು, ಮಾರಾಟಗಾರೊಂದಿಗೆ ಜರುಗಿದ ಡಿಸಿ ಅವರ ತುರ್ತು ವಿಡಿಯೋ ಸಂವಾದ ಸಭೆ

ಕೃಷಿ ಇಲಾಖೆ ಅಧಿಕಾರಿ, ರೈತರು, ಮಾರಾಟಗಾರೊಂದಿಗೆ ಜರುಗಿದ ಡಿಸಿ ಅವರ ತುರ್ತು ವಿಡಿಯೋ ಸಂವಾದ ಸಭೆ  DC's emergency video conferencing meeting with Agriculture Department officials, farmers, vendors

ಧಾರವಾಡ 22: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಜೂನ್ ಮೊದಲ ವಾರದಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸುತ್ತಿದ್ದಾರೆ. ರೈತರ ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ರಸಗೊಬ್ಬರಗಳ ದಾಸ್ತಾನು ಇದ್ದು, ರೈತರಿಗೆ ಸಕಾಲಕ್ಕೆ ಬೀಜ, ರಸಗೊಬ್ಬರ ತಲುಪುವಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಮತ್ತು ಕಾನೂನು ಮೀರಿ ಹೆಚ್ಚಿನ ದರಕ್ಕೆ ಮಾರಾಟ, ಅನಧಿಕೃತ ದಾಸ್ತಾನು, ಕೃತಕ ಅಭಾವ ಸೃಷ್ಠಿಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಚಕ್ಷಣ ದಳಗಳನ್ನು ರಚಿಸಿ, ನಿರಂತರವಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು.  ಅವರು ಇಂದು (ಮೇ.22) ಮಧ್ಯಾಹ್ನ ಕೃಷಿ ಇಲಾಖೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು ಮತ್ತು ರೈತ ಪ್ರಮುಖರೊಂದಿಗೆ ವಿಡಿಯೋ ಸಂವಾದ (ಗೂಗಲ್ ಮೀಟ್) ಸಭೆ ಜರುಗಿಸಿ, ಮಾತನಾಡಿದರು.  

ಮಾರುಕಟ್ಟೆಯಲ್ಲಿ ಅನಿಧಿಕೃತ, ನಕಲಿ ಬೀಜ, ಗೊಬ್ಬರ ಬರದಂತೆ ಮತ್ತು ಮಾರಾಟವಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮಾರಾಟ ಕೇಂದ್ರಗಳಿಗೆ ನಿರಂತರ ಭೇಟಿ ಮೂಲಕ ಉತ್ತಮ ಗುಣಮಟ್ಟದ ಮತ್ತು  ಇಲಾಖೆ ಶಿಫಾರಸು ಮಾಡಿರುವ ಬೀಜ, ರಸಗೊಬ್ಬರ ರೈತರಿಗೆ ಲಭಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಬೀಜ, ರಸಗೊಬ್ಬರಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ತಕ್ಷಣ ಪರೀಶೀಲಿಸಿ, ಸೂಕ್ತ ಕ್ರಮವಹಿಸಬೇಕು. ನಿರ್ಲಕ್ಷಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.ಮಧ್ಯಪ್ರಾಚ್ಯ ಯುದ್ಧದ ಕಾರಣಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬೇಡಿಕೆ ಪ್ರಮಾಣದಲ್ಲಿ ರಸಗೊಬ್ಬರಗಳ ಪೂರೈಕೆ ವಿಳಂಬವಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮಿಗೆ ಬಿತ್ತನೆಯಾಗುವ ಪ್ರದೇಶಕ್ಕೆ ಅಗತ್ಯವಿರುವಷ್ಟು ವಿವಿಧ ಬೀಜ ಮತ್ತು ರಸಗೊಬ್ಬರಗಳು ದಾಸ್ತಾನು ಇದ್ದು, ಮಾರಾಟಗಾರರಿಗೆ ಹಂಚಿಕೆ ಮಾಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ತಮ್ಮ ಕೃಷಿ ಭೂಮಿ ಇರುವ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಂದ ತಮಗೆ ಬೇಕಾದ ಬೀಜಗಳನ್ನು ಹಾಗೂ ತಮ್ಮ ಸಮೀಪದ ರಸಗೊಬ್ಬರ ಮಾರಾಟ ಕೇಂದ್ರದಿಂದ ನಿಯಮಾನುಸಾರ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.  

ಸರ್ಕಾರ ಹಾಗೂ ಕೃಷಿ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸದೇ ರೈತರಿಗೆ ಯಾವುದೇ ಲಿಂಕ್ ಗೊಬ್ಬರ ನೀಡುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ರಸಗೊಬ್ಬರ ಖರೀದಿಗೆ ರಶೀದಿ ನೀಡದಿರುವುದು, ಮಾರಾಟ ಅಂಗಡಿ ಮುಂದೆ ರಸಗೊಬ್ಬರಗಳ ದಾಸ್ತಾನು ವಿವರ ಮತ್ತು ದರಗಳ ಕುರಿತು ಸೂಚನಾ ಫಲಕ ಅಳವಡಿಸದಿದ್ದರೆ, ಮತ್ತು ಸಾರ್ವಜನಿಕರಿಂದ ರಸಗೊಬ್ಬರ ಮಾರಾಟ ಕೇಂದ್ರಗಳ ಬಗ್ಗೆ ಹಾಗೂ ಬೀಜ ವಿತರಣಾ ಕೇಂದ್ರಗಳ ಬಗ್ಗೆ ದೂರು ಬಂದಲ್ಲಿ ಅಂತಹ ಅಂಗಡಿಗಳ ಮಾರಾಟ ಪರವಾನಿಗೆಯನ್ನು ಅಮಾನತ್ತು ಮಾಡಿ, ತಕ್ಷಣ ಆದೇಶಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಎಚ್ಚರಿಸಿದರು.  ಬಿತ್ತನೆ ಗುರಿಯ ಪ್ರದೇಶ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಮುಖ್ಯವಾಗಿ ಆಹಾರ ಧಾನ್ಯಗಳಾದ ಭತ್ತ, ಜೋಳ, ಮುಸುಕಿನ ಜೋಳ, ಊದಲು, ಕೊರಲೆ, ನವಣೆ, ಬರಗು, ಸಾವೆ, ಹಾರಕ ಹಾಗೂ ದ್ವಿದಳ ಧಾನ್ಯಗಳಾದ ತೊಗರಿ, ಹುರಳಿ, ಉದ್ದು, ಹೆಸರು, ಅಲಸಂದಿ, ಅವರೆ ಹಾಗೂ ಶೇಂಗಾ, ಸೊಯಾಅವರೆ, ಹತ್ತಿ ಮತ್ತು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ.