ಡಿ.ದೇವರಾಜ ಅರಸು ನಾಡಿನ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ: ನಾಗೇಶ ನಾಯಕ

ಡಿ.ದೇವರಾಜ ಅರಸು ನಾಡಿನ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ: ನಾಗೇಶ ನಾಯಕ D. Devaraj Aras was a great leader who worked for the prosperity of the country: Nagesh Nayak

ಡಿ.ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆ  

ಬೆಳಗಾವಿ, ಆ.20 :  ಕರ್ನಾಟಕದಲ್ಲಿ ಮೌನ ಕ್ರಾಂತಿಗೆ ಮುನ್ನುಡಿ ಬರೆದಂತಹ ಮಹಾನ ಮೇದಾವಿ, ಬದುಕಿನುದ್ದಕ್ಕು ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡಿಕೊಂಡು ಬಂದಂತಹ ರಾಜಕಾರಣಿ, ಹಸಿದ ಹೊಟ್ಟೆಗೆ ಅನ್ನ, ಅಸಹಾಯಕ ಕೈಗಳಿಗೆ ದುಡಿಮೆಯ ಅವಕಾಶ ಒದಗಿಸಿ ಕೊಟ್ಟಂತಹ ಮಹಾನ ಮಾನವತಾವಾದಿ, ಪುಸ್ತಕ ಪ್ರೇಮಿ ಹಾಗೂ ನಮ್ಮ ನಾಡು ಕಂಡಂತಹ ದೀಮಂತ ನಾಯಕ ಡಿ. ದೇವರಾಜ ಅರಸುರವರು ಎಂದು ಬೈಲಹೊಂಗಲ ತಾಲೂಕಿನ ಉಡಕೇರಿ ರಾಮಲಿಂಗೇಶ್ವರ ಪ್ರೌಢ ಶಾಲಾ ಶಿಕ್ಷಕ ನಾಗೇಶ ನಾಯಕ ಅವರು ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಆ.20) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ದಿವಗಂತ ಡಿ.ದೇವರಾಜಅರಸು ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಸರಳತೆಯ ಪ್ರತಿರೂಪ, ಸಮಾಜ ಸುಧಾರಕ, ದೀನ ದಲಿತರ ಬಂದು, ತಬ್ಬಲಿ ಜಾತಿಗಳ ತಂದೆ, ಬಡವರ ಸಶಕ್ತ ಧ್ವನಿ, ತುಳಿತಕ್ಕೊಳಗಾದವರನ್ನು ಎದೆಗಪ್ಪಿಕೊಂಡು ಸಂತೈಸಿದ ಅಂತಃಕರಣದ ಆಪ್ತ ಜೀವ, ಅನ್ನದಾತರ ಬದುಕಿನ ಆಶಾಕಿರಣ, ಐತಿಹಾಸಿಕ ಬದಲಾವಣೆಗಳಿಗೆ ನಾಂದಿಯನ್ನು ಹಾಡಿದ ಮಹಾನ ನಾಯಕರು ಎಂದರು.    

ದೇವರಾಜ, ದೇವಿರಮ್ಮ ಅವರ ಮಗನಾಗಿ ಜನಿಸಿದರು. ಇವರು 1930 ದಶಕದಲ್ಲಿ ರಾಜಕೀಯ ಪ್ರವೇಶಿಸುತ್ತಾರೆ, 1941ರಲ್ಲಿ ಪ್ರಜಾ ಪ್ರತಿನಿಧಿ ಸಭೆಗೆ ಆಯ್ಕೆಯಾಗುತ್ತಾರೆ, 1952 ರಲ್ಲಿ ಮೈಸೂರು ರಾಜ್ಯ ವಿಧಾನಸಭೆಗೆ ಆಯ್ಕೆಯಾಗುತ್ತಾರೆ, ಇವರು ಗಾಂಧಿವಾದಿಯಾಗಿದ್ದರು.  

ಸಂಘಟಣಾ ಶಕ್ತಿಯ ಸಹ ಹೊಂದಿದ ದೇವರಾಜ ಅರಸು ಅವರು 1942ರ ಕ್ವಿಟ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಜೈಲುವಾಸವನ್ನು ಸಹ ಅನುಭವಿಸಿದ್ದರು ಎಂಬ ಇತಿಹಾಸ ನಮಗೆ ದೊರೆಯುತ್ತದೆ. ಸತತ 40 ವರ್ಷಗಳ ಕಾಲ ಹುಣಸೂರಿನಿಂದ ಶಾಸಕರಾಗಿದ್ದು ಬಹುದೊಡ್ಡ ಹಿರಿಮೆಯಾಗಿದೆ.   

ಅರಸುರವರು ಬಹಳಷ್ಟು ಇಲಾಖೆಗಳ ಸಚಿವರಾಗಿ ನಿಭಾಯಿಸಿರುತ್ತಾರೆ. ಕರ್ನಾಟಕದಲ್ಲಿ ಅತಿ ಹೆಚ್ಚುಕಾಲ ಮುಖ್ಯಮಂತ್ರಿಯಾಗಿದ್ದರು ಎಂಬ ಹೆಗ್ಗಳಿಗೆ ಅವರಿಗೆ ಸಲ್ಲುತ್ತದೆ.  

ರೈತರ, ಬಡವರ, ಹಿಂದುಳಿದವರ, ಶೋಷಣೆಗೆ ಒಳಪಟ್ಟವರ ಪರವಾಗಿ ತಮ್ಮ ಕೆಲಸವನ್ನು ಮಾಡಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲೆ ಕನ್ನಡವನ್ನ ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಿದ್ದರು. ನಿರುದ್ಯೋಗ ಪದವಿಧರ ಯುವಕರಿಗೆ ಗೌರವಧನ ನೀಡಿದವರು.  

ಶೇ.55 ರಷ್ಟು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿಕೊಡುತ್ತಾರೆ. ಭೂ ಸುಧಾರಣೆ ಯೋಜನೆಯನ್ನು ತರುತ್ತಾರೆ. ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆಯನ್ನ ತಮ್ಮ ಅವಧಿಯಲ್ಲಿ ಜಾರಿಗೆ ತರುತ್ತಾರೆ.  

ಈ ಕಾಯ್ದೆಯಿಂದಾಗಿ ಬಹಳಷ್ಟು ರೈತರಿಗೆ ಉಳುಮೆಗೆ ಭೂಮಿ ದೊರೆಯುತ್ತದೆ. ನಾಡಿನ ಜನರ ಸಂಕಷ್ಟಗಳನ್ನು ತಿಳಿದುಕೊಳ್ಳಲು ಮಾರು ವೇಶದಲ್ಲಿ ನಗರದಲ್ಲಿ ತಿರುಗಾಡಿ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದರು ಎಂದು ಶಿಕ್ಷಕರಾದ ನಾಗೇಶ ನಾಯಕ ಅವರು ವಿಶೇಷ ಉಪನ್ಯಾಸ ನೀಡಿದರು.  

ಸಹಾಯಕ ಪೊಲೀಸ ಆಯುಕ್ತರಾದ ಸದಾಶಿವ ಕಟ್ಟಿಮನಿ ಅವರು ಮಾತನಾಡಿ ಹುಣ್ಣಿಮೆಯ ರಾತ್ರಿಯಲ್ಲಿ ನಕ್ಷತ್ರದ ಮಧ್ಯೆ ಚಂದ್ರ ಹೇಗೆ ಮಿಂಚುತ್ತಾನೆ ಅದೆ ತೆರನಾದ ಡಿ.ದೇವರಾಜ ಅರಸುರವರು. ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿಕೊಟ್ಟಂತಹ ಮಹಾನ ಮೇದಾವಿ ರಾಜಕಾರಣಿ ಎಂದರು.  

ಅರಸು ಅವರು ಜಾರಿಗೆ ತಂದಂತಹ ಉಳುವವನೆ ಭೂ ಒಡೆಯ ಎಂಬ ಕಾನೂನಿನಿಂದಾಗಿ ಬಹಳಷ್ಟು ಜನ ಜಮಿನುಗಳನ್ನು ಪಡೆದು ತಮ್ಮ ಜೀವನ ರೂಪಿಸಿಕೊಳ್ಳಲು ಅನುಕೂಲವಾಯಿತು. ಇದರಿಂದ ಸಾಕಷ್ಟು ಜನರು ಜಮೀನ್ದಾರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು.  

ಡಿ.ದೇವರಾಜ ಅರಸುರವರ ಅಧಿಕಾರ ಅವಧಿಯಲ್ಲಿ   ತುಳಿತಕ್ಕೊಳಗಾದ ಜನರಿಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿ ಅಂತಹ ಜನರು ಸಮಾಜದಲ್ಲಿ ಗೌರವಯುತವಾದ ಜೀವನ ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ. ಅರಸುರವರ ಸಾಧನೆಗಳು ಅಜರಾಮರಗಳಾಗಿವೆ ಎಂದು ಸದಾಶಿವ ಕಟ್ಟಿಮನಿ ಹೇಳಿದರು.  

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ,  ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಆಯುಷ ಅಧಿಕಾರಿ ಶ್ರೀಕಾಂತ ಸುಣಧೋಳಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹರ್ಷ.ಎಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.