ರೈತರಿಗೆ ಆರ್ಥಿಕ ನಷ್ಟ ತಂದೊಡ್ಡಿದ ಫೆಂಗಲ್ ಚಂಡಮಾರುತ

Cyclone Fengal brought financial loss to farmers

ವರದಿ:ಮಾಂಜರಿ /ಸಂತೋಷ್ ಕುಮಾರ್ ಕಾಮತ್ 

ಫೆಂಗಲ್ ಚಂಡಮಾರುತ ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ದ.ಭಾರತದ ಬಹುತೇಕ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೇವಲ ಮಳೆಯನ್ನು ಮಾತ್ರ ಅದು ತಂದಿಲ್ಲ. ಅದರೊಟ್ಟಿಗೆ  ರೈತರ ಬೆಳೆಗಳ ಮೇಲೂ ಪರಿಣಾಮ ಬೀರಿದ್ದು, ರೈತರಿಗೆ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ. 

ಅದರಂತೆ  ಗಡಿ ಭಾಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ  ಕಾಗವಾಡ ಅಥಣಿ ಭಾಗದಲ್ಲಿ ಹೆಚ್ಚು ಬೆಳೆಯುವ ದ್ರಾಕ್ಷಿಯ ಮೇಲೆಯೂ ಫೆಂಗಲ್ ಹೆಚ್ಚು ಪರಿಣಾಮ ಬೀರಿದೆ. ಹೀಗಾಗಿ ದ್ರಾಕ್ಷಿ ಬೆಳೆಯುವ ರೈತರ ಕಣ್ಣಲ್ಲಿ ನೀರು ಬರುವ ಸ್ಥಿತಿ ನಿರ್ಮಾಣವಾಗಿದೆ. ಚಂಡಮಾರುತದ ಪರಿಣಾಮವಾಗಿ ವರ್ಷಾನುಗಟ್ಟಲೇ ಕಷ್ಟಪಟ್ಟು ಬೆಳೆಯುವ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ. ಹೀಗಾಗಿ ಫೆಂಗಲ್ 

ಚಂಡಮಾರುತದಿಂದ ಉಂಟಾಗಿರುವ ದ್ರಾಕ್ಷಿ ಹಾನಿಯನ್ನು ರಕ್ಷಣೆ ಮಾಡುವಲ್ಲಿ ರೈತರು ಈಗ ಪರದಾಟ ನಡೆಸಿದ್ದಾರೆ. 

ದ್ರಾಕ್ಷಿ ಮೇಲೆ ಫೆಂಗಲ್ ಪರಿಣಾಮ: 

ರಾಜ್ಯದಲ್ಲಿ ಅದರಲ್ಲೂ ದ್ರಾಕ್ಷಿ ಹೆಚ್ಚಾಗಿ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಫಂಗಲ್ ಚಂಡಮಾರುತ ಆಕ್ರಮಿಸಿರುವು ದರಿಂದಬಿಸಿಲುಮಾಯವಾಗಿದೆ. ರಾತ್ರಿಯಿಡಿ ಮಂಜು ಕವಿದ ವಾತಾವರಣ, ಆಗಾಗ ತುಂತುರು ಮಳೆ ಸುರಿಯುತ್ತಿರುವುದರಿಂದ ದ್ರಾಕ್ಷಿ ಬೆಳೆಗೆ ಅಡಚಣೆ ಉಂಟಾಗಿದೆ. ಹೀಗಾಗಿ ಇನ್ನೇನು ಕೈಗೆ ಬರಲಿರುವ ದ್ರಾಕ್ಷಿ ಬೆಳೆ ಹಾಳಾಗುವ ಸಾಧ್ಯತೆ ಇದೆ. 

ಸದ್ಯ ದ್ರಾಕ್ಷಿ ಬೆಳೆಗೆ ಬಿಸಿಲು ಬೇಕಿರುವ ಸಮಯದಲ್ಲಿ ಮಂಜಿನ ಪರಿಣಾಮದಿಂದ ವಾತಾವರಣದಲ್ಲಿ ಭಾರೀ ಬದಲಾವಣೆ ಯಾಗಿದೆ. ಫೆಂಗಲ್ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಕಳೆದನಾಲೈದು ದಿನಗಳಿಂದ ಮೋಡ ಮುಸುಕಿದ ವಾತಾವ ರಣ ನಿರ್ಮಾ ಣವಾಗಿದೆ. ಹೀಗಾಗಿ ದ್ರಾಕ್ಷಿ ಬೆಳೆಗೆ ಭಯಾನಕ ರೋಗ ಹರಡುವ ಎದುರಾಗಿದೆ. 

ಜಿಲ್ಲೆಯಲ್ಲಿ ದ್ರಾಕ್ಷಿ  ಬೆಳೆ ಎಷ್ಟು..?: 

ವಿಜಯಪುರ, ಬಾಗಲ ಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದರಲ್ಲೂ ಬೆಳಗಾವಿ  ಜಿಲ್ಲೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ರೈತರು ದ್ರಾಕ್ಷಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟರ್‌ನಲ್ಲಿ ಬೆಳೆಯಲಾಗಿರುವ ದ್ರಾಕ್ಷಿ ಬೆಳೆಗೆ ದವಣೆ ರೋಗದ ಕಾಟ ಶುರುವಾಗಿದೆ. ಈಗಾಗಲೇ ಕೆಲ ರೈತರ ಜಮೀನುಗಳಲ್ಲಿದವಣೆ ರೋಗ ವಕ್ಕರಿಸಿದೆ. ಇದರ ಜೊತೆಗೆ ಬೂದು ರೋಗ, ಡೌನಿಮಿಲ್ಟಿವ್, ಕೊಳೆ ರೋಗ ಹರಡುವ ಸಾಧ್ಯತೆಯೂ ಇದೆ. ರೋಗದ ಪರಿಣಾಮ ಹಾಗೂ ವಾತಾವರಣದ ಪರಿಣಾಮವಾಗಿ ದ್ರಾಕ್ಷಿಹೂಗಳು ಕೊಳೆಯುತ್ತಿದ್ದು, ಕಾಳುಗಳು ಉದುರುತ್ತಿವೆ. ದ್ರಾಕ್ಷಿಗೆ ಬಾಧಿತವಾಗಿರುವ ರೋ ಗ ಕಂಟ್ರೋಲ್ ಮಾಡಲು ರೈತರು ಪರದಾಡು ತ್ತಿದ್ದಾರೆ. ಯಾಕೆಂದರೆ ರೋಗ ಉಲ್ಬಣಿ ಸುವ ಕಾರಣ ಸಾವಿ ರಾರು ರೂಪಾಯಿ ಖರ್ಚು ಮಾಡಿ ಓಷಧಿ ಸಿಂಪಡಿಸಬೇಕಿದೆ. ನಿತ್ಯ ಪ್ರತಿ ಎಕರೆಗೆ 5 ರಿಂದ 6 ಸಾವಿರ ವೆಚ್ಚದ ಓಷಧಿ ಸಿಂಪಡಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬಂದು ರಿಯಾಯಿತಿ ದರದಲ್ಲಿ ಓಷಧಿ ಕೊಡುವುದು, ಬೆಳೆ ವಿಮೆಯ ಹಣ ಹೆಚ್ಚಿಸುವುದು, ಪರಿಹಾರ ಕೊಡುವ ಕೆಲಸ ಮಾಡಬೇಕಿದೆ ಎಂಬುದು ಬೆಳೆ ಹಾನಿಗೊಳಗಾಗಿರುವ ರೈತರ ಮನವಿ. 

ಪ್ರತಿ ಎಕರೆಗೆ 2 ಲಕ್ಷ ಖರ್ಚುಮಾಡಿ ಬೆಳೆಯುವ ದ್ರಾಕ್ಷಿ ಹವಾಮಾನ ವೈಪರೀತ್ಯಕ್ಕೆ ಸಿಲುಕಿದರೆ ಸಂಕಷ್ಟವಾಗಲಿದೆ. ನಾವು ಎಂಟು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ಈಗಿನ ವಾತಾವರಣದಿಂದ ನಿತ್ಯ ಎಕರೆಗೆ  4 ರಿಂದ 5 ಸಾವಿರ ಓಷಧಿ ಸಿಂಪಡಿಸುತ್ತಿದ್ದೇವೆ. 

ಶೇಷಗೌಡ ಪಾಟೀಲ 

ದ್ರಾಕ್ಷಿ ಬೆಳೆಗಾರ ನಸಲಾಪುರ  ತಾ ರಾಯಬಾಗ 


ರೈತರು ದ್ರಾಕ್ಷಿ ಸಸಿಗಳನ್ನು ಹಚ್ಚಲು ಎಕರೆಗೆ ಈ 4 ಲಕ್ಷ ಖರ್ಚು ಮಾಡಿರುತ್ತಾರೆ. ಅದನ್ನು ತೆಗೆಯಬೇಕಾದರೆ ಈಗ ಮತ್ತೆ  50 ಸಾವಿರ ಖರ್ಚಾಗಲಿದೆ. ಎಕರೆಗೆ 4 ಟನ್ ಒಣದ್ರಾಕ್ಷಿ ಇಳುವರಿ ಬಂದು ಅದು ಪ್ರತಿ ಕೆಜಿಗೆ ? 150 ರೂಪಾಯಿ ಮೇಲೆ ಮಾರಾಟವಾಗಬೇಕು. ಈಗ ವಾತಾವರಣದಲ್ಲಿ ಏರುಪೇರಾಗಿದ್ದರಿಂದ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. 

ಸಿ ದುಂಡಪ್ಪ ಬೆಂಡವಾಡೇ , 

ಮಾಜಿ ಬಿಜೆಪಿ ರೈತಮೋರ್ಚಾ ಚೀಕೋಡಿ ಜಿಲ್ಲಾಧ್ಯಕ್ಷ