ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವತ್ತ ಒಲವು ತೋರಿ: ಎಚ್‌.ಪಿ. ಶಿಕಾರಿ ರಾಮು

ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವತ್ತ ಒಲವು ತೋರಿ: ಎಚ್‌.ಪಿ. ಶಿಕಾರಿ ರಾಮು  Cut down on mobile phone usage and cultivate an interest in reading books: H.P. Shikari Ramu

ಕಂಪ್ಲಿ, ಆ.12: ಪಟ್ಟಣದ 22ನೇ ವಾರ್ಡ್ನ ಸಿಂಧೋಳ್ ಕಾಲೊನಿಯ ಅಲೆಮಾರಿ ಗ್ರಂಥಾಲಯದಲ್ಲಿ ಅಲೆಮಾರಿ ಗ್ರಂಥಾಲಯದ ಮೇಲ್ವಿಚಾರಕ ಎಚ್‌.ಪಿ. ಶಿಕಾರಿ ರಾಮು ಅವರ ನೇತೃತ್ವದಲ್ಲಿ ಭಾರತದ ಗ್ರಂಥಾಲಯದ ಪಿತಾಮಹ ಡಾ. ಎಸ್‌.ಆರ್‌. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌.ಪಿ. ಶಿಕಾರಿ ರಾಮು, ಪುಸ್ತಕ ಓದುವುದರಿಂದ ಇತಿಹಾಸದ ಜತೆಗೆ ಪ್ರಾಪಂಚಿಕ ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯ. ಜೀವನದ ಅನೇಕ ಪ್ರಶ್ನೆಗಳಿಗೆ ಪುಸ್ತಕಗಳ ಮೂಲಕ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದರು.  

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದ್ದು, ಅವರಲ್ಲಿ ಓದುವ ಆಸಕ್ತಿ ಹೆಚ್ಚಿಸುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳು ಉತ್ತಮ ನೆರವಾಗುತ್ತವೆ ಎಂದು ತಿಳಿಸಿದರು.  

ಇಂದಿನ ಮಕ್ಕಳು ದೇಶದ ಭವಿಷ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜತೆಗೆ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಣ್ಣ ಹುಲುಗಪ್ಪ, ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಸಂಘದ ಉಪಾಧ್ಯಕ್ಷ ಎಚ್‌.ಪಿ. ಜೆ. ಬಾಬು, ಸಮಾಜದ ಮುಖಂಡರಾದ ಗೋಪಿ, ಅಂಜಿನಪ್ಪ, ಸುದಗಾಡು ಸಿದ್ದರ ಹನುಮಂತಪ್ಪ, ಮಾರೆಪ್ಪ, ಸಿಂಧೋಳ್ ವೆಂಕಟೇಶ, ಕಲಾವಿದರಾದ ಸೋಮು, ಬಾಲಪ್ಪ, ಅಂಬಣ್ಣ ಸೇರಿದಂತೆ ಸಮಾಜದವರು ಹಾಗೂ ಓದುಗರು ಉಪಸ್ಥಿತರಿದ್ದರು.