ಕನ್ನಡ ಬಳಕೆಯಿಂದ ಸಂಸ್ಕೃತಿ ಉಳಿಕೆ: ಚಂದ್ರಶೇಖರ ಹೆಗಡೆ

ಕನ್ನಡ ಬಳಕೆಯಿಂದ ಸಂಸ್ಕೃತಿ ಉಳಿಕೆ: ಚಂದ್ರಶೇಖರ ಹೆಗಡೆ Cultural heritage preserved through use of Kannada: Chandrashekar Hegde

ಬಾಗಲಕೋಟೆ 05: ಕನ್ನಡವು ಭವ್ಯ ಪಂರಂಪರೆಯನ್ನು ಹೊಂದಿರುವ ಭಾಷೆಯಾಗಿದ್ದು ಯುವ ತಲೆಮಾರು ಅನ್ಯ ಭಾಷೆ ಮತ್ತು ಸಂಸ್ಕೃತಿಗಳತ್ತ ಮಾರುಹೋಗಿ ಮಾತೃಭಾಷೆ ಮರೆಯುತ್ತಿರುವುದು ಖೇದಕರ ಸಂಗತಿ ಎಂದು ಬಾದಾಮಿ ಸರಕಾರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ ಹೆಗಡೆ ಹೇಳಿದರು.  

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಸಂಘ, ಪದವಿ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗ ಹಾಗೂ ಸಂಗೀತ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮವನ್ನು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ​‍್ರೆ್ಪಣ ಮಾಡಿ ಉದ್ಘಾಟಿಸಿ ಬಳಿಕ ಪತ್ರಿಕೋದ್ಯಮ ವಿಭಾಗದ ಕಲಾವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡವು ಸಾಹಿತ್ಯದ ಅಸ್ಮಿತೆಯಾಗಿದ್ದು ನಾಡಿನ ಸಂಸ್ಕೃತಿಯು ಮಾದರಿಯ ಸಂಕೇತವಾಗಿದೆ. ಎಷ್ಟೇ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕಲಿತರೂ ಕನ್ನಡ ಪರಂಪರೆಯನ್ನು ಬಿಟ್ಟು ಬದಕಲು ಸಾಧ್ಯವಿಲ್ಲ. ಹರಿಹರ, ರಾಘವಾಂಕ, ಪಂಪ ಸೂಪ್ರಭುಗಳಂತಹ ನೂರಾರು ಕನ್ನಡಿಗರು ಕಾವೇರಿಯಿಂದ ಗೋಧಾವರಿಯವರಿಗೆ ಹೆಮ್ಮೆಯಿಂದ ನಾಡಿನ ಬಗ್ಗೆ ಬಣ್ಣಿಸಿದ್ದಾರೆ ಎಂದರು. 

ವಿವೇಕ, ಸಂಸ್ಕೃತಿ, ಸತ್ಯ, ಕನ್ನಡದ ಮೌಲ್ಯ, ಗಂಭೀರತೆ, ಕನ್ನಡದ ಮೇಲಿನ ಅಭಿಮಾನ ಇಂತಹ ಜೀವಂತಿಕ ಮೌಲ್ಯಗಳನ್ನು ಇಂದಿನ ಆಧುನಿಕತೆಯಲ್ಲಿ ಹುಡುಕಬೇಕಾಗಿದೆ. ಇದರ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಅವಶ್ಯಕ. ಪರಭಾಷೆಯ ವ್ಯಾಮೋಹ ಇತ್ತೀಚೆಗೆ ಹೆಚ್ಚುತ್ತಿದ್ದು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂಗ್ಲೀಷ್ ಅಧ್ಯಯನ ಸ್ವಾಗತಾರ್ಹ ಆದರೆ ಭಾಷೆಯ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗುತ್ತಿರುವುದು ಖೇದಕರ ಅದರಿಂದ ಹೊರಬರುವ ಕೆಲಸವನ್ನು ಯುವಶಕ್ತಿ ಮಾಡಬೇಕಿದೆ. ಶ್ರೀವಿಜಯ ರಚಿತ ಕವಿರಾಜಮಾರ್ಗವು ಕನ್ನಡಿಗರ ಸಂಸ್ಕೃತಿ, ಇತಿಹಾಸ, ಭವ್ಯತೆ, ಕನ್ನಡಿಗರ ಶೌರ್ಯವನ್ನು ಮತ್ತು ಕನ್ನಡದ ಸಾಧನೆಯ ಕುರಿತು ಸುಂದರವಾಗಿ ವಿವರಿಸಿದ್ದು ಅದನ್ನು ರೂಡಿಸಿಕೊಳ್ಳುವ ಕೆಲಸವಾಗಬೇಕು. ಕಪ್ಪೆ ಆರ್ಯಭಟನ ಶಾಸನ ನಮ್ಮ ಬಾದಾಮಿಯಲ್ಲಿಯೇ ಇದ್ದು ಶಾಸನದ ಪ್ರತಿ ಸಾಲು ಕನ್ನಡಿಗರ ವ್ಯಕ್ತಿತ್ವವನ್ನು ಎತ್ತಿ ಸಾರುತ್ತದೆ. ಕನ್ನಡಿಗರೇ ಕನ್ನಡದ ಮೇಲಿನ ಅಭಿಮಾನ ಮತ್ತು ವಿವೇಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. 

ಕನ್ನಡದ ಏಳಿಗೆಯಲ್ಲಿ ಮಾಧ್ಯಮಗಳದ್ದು ಮೆಲುಗೈ: ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದಾಗಿದೆ. ಮೊದಲಿನಿಂದಲೂ ಕನ್ನಡ ಪತ್ರಿಕೆಗಳು ಭಾಷಾ ಪರಂಪರೆಯನ್ನು ಸಂರಕ್ಷಿಸಿಕೊಂಡು ಬರುತ್ತಿವೆ. ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಿಂದ ಪಾಕ್ಷಿಕ ಪತ್ರಿಕೆಯನ್ನು ವಿದ್ಯಾರ್ಥಿಗಳು ಹೊರತರುತ್ತಿರುವುದು ಕನ್ನಡವನ್ನು ಬೆಳಸುವ ಒಂದು ಮಾದರಿ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳೇ ಪತ್ರಿಕೆಗಾಗಿ ಸುದ್ದಿ, ಲೇಖನಗಳನ್ನು ಬರೆಯುತ್ತಿರುವುದರಿಂದ ಭಾಷಾ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದರು. 

ಪ್ರಾಚಾರ್ಯರಾದ ಎಸ್‌.ಆರ್ ಮೂಗನೂರಮಠ ಅವರು ಕನ್ನಡದ ಅಕ್ಷರಗಳು ಇತರ ಭಾಷೆಗಳಿಗೆ ಹೋಲಿಸಿದರೆ ದುಂಡಾದ ಮತ್ತು ಸುಂದರವಾದ ಭಾಷೆಯಾಗಿದೆ. ಅದನ್ನು ಸುಂದರವಾಗಿ ಬರೆಯಲು ರೂಡಿಸಿಕೊಳ್ಳಿ ಪ್ರತಿದಿನ ಒಂದು ಕನ್ನಡದ ಹೊಸ ಶಬ್ದವನ್ನು ಕಲಿತರೆ ಕನ್ನಡ ಭಂಡಾರವನ್ನು ಸ್ವಾಧಿನಪಡೆಸಿಕೊಳ್ಳಬಹುದು. ಸಣ್ಣ ಬರಹಗಳ ಹವ್ಯಾಸವನ್ನು ಬೆಳಸಿಕೊಳ್ಳಿ ವಿದ್ಯಾರ್ಥಿಗಳು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಮತ್ತು ಬರೆಯಲು ಕಲಿತರೆ ಸಾಕು ಕನ್ನಡತಾಯಿಗೆ ಸಲ್ಲಿಸುವ ದೊಡ್ಡ ಸೇವೆಯಾಗುತ್ತದೆ ಎಂದರು. 

ಸ್ಪರ್ಧಾವಿಜೇತರಿಗೆ ಪ್ರಮಾಣಪತ್ರ ವಿತರಣೆ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊಯ್ಸಳ ತಂಡ ಪ್ರಥಮ, ಬಾದಾಮಿ ಚಾಲುಕ್ಯ ತಂಡ ದ್ವತೀಯ, ಪಲ್ಲವ ತಂಡ ತೃತೀಯ ಸ್ಥಾನ. ಪದಬಂಧ ರಚನೆ ಸ್ಪರ್ಧೆಯಲ್ಲಿ ಸೃಷ್ಟಿ ಸಾವಕಾರ ಪ್ರಥಮ, ಗಂಗಾಧರ ಬಡಿಗೇರ ದ್ವಿತೀಯ, ಬಸವರಾಜ ಗೋತಗಿ ತೃತೀಯ ಸ್ಥಾನ ಪಡೆದರು. ಭಾವಗೀತಿಯಲ್ಲಿ ದೀಪಾ ಹೆಳವರ, ಕಾವ್ಯಾ ಕೋವಳ್ಳಿ, ನಿಹಾರಿಕಾ ಯರಗುಂಡಿ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಹೊಯ್ಸಳ ತಂಡ, ರಾಷ್ಟ್ರಕೂಟ ತಂಡ, ಗಂಡಭೇರುಂಡ ತಂಡ ಮತ್ತು ಪ್ರಬಂದ ಸ್ಪರ್ಧೆಯಲ್ಲಿ ನಾಗಮ್ಮ ಕಾಗಲಗೊಂಬ, ಶಿವಕುಮಾರ ಚಿಕ್ಕಮಠ, ಪಾರ್ವತಿ ಹುಗ್ಗಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದು ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಪ್ರಧ್ಯಾಪಕರುಗಳಾದ ಡಾ.ಕೆ.ವಿ ಮಠ, ಡಾ. ನಾಗರಾಜು ಆರ್, ಡಾ. ವೀಣಾ ಕಲ್ಮಠ, ಡಾ. ಎನ್‌.ಬಿ ವಿರೂಪಾಕ್ಷಿ, ಡಾ.ಎಸ್ ಡಿ ಕೆಂಗಲಗುತ್ತಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.