ವಿದ್ಯಾಭ್ಯಾಸಕ್ಕಿಂತ ಹೆಚ್ಚು ಸಂಸ್ಕಾರವನ್ನು ರೂಪಿಸಿಕೊಳ್ಳಿ: ಗುರುಪಾದ ಸ್ವಾಮೀಜಿ

ವಿದ್ಯಾಭ್ಯಾಸಕ್ಕಿಂತ ಹೆಚ್ಚು ಸಂಸ್ಕಾರವನ್ನು ರೂಪಿಸಿಕೊಳ್ಳಿ: ಗುರುಪಾದ ಸ್ವಾಮೀಜಿ Cultivate culture more than education: Gurupada Swamiji

ಬಾಗಲಕೋಟೆ, 12: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದಕ್ಕೂ ಹೋರಾಟವಿದೆ, ಕೇವಲ ಅಂಕಗಳಿಂದ ಯಶಸ್ಸು ಸಾಧ್ಯವಿಲ್ಲ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಸಂಸ್ಕಾರವನ್ನು ರೂಪಿಸಿಕೊಳ್ಳುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ಕಲ್ಮಠ ಬೀಳಗಿಯ ಗುರುಪಾದ ಶಿವಾಚಾರ್ಯ ಸ್ವಾಮಿಗಳು ಹೇಳಿದರು. 

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಧ್ಯಯನದ ವಿಷಯದ ಮೇಲೆ ಪ್ರೀತಿ ಮತ್ತು ಉಪಮ್ಯಾಸಕರ ಮೇಲೆ ಗೌರವ ಹೊಂದಿದಾಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಎಂದರು. 

ಉಪನ್ಯಾಸಕ ವೃತ್ತಿ ಕೇವಲ ಸಂಬಳಕ್ಕಾಗಿ ಅಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳಿಸುವ ಸೇವೆಯಾಗಿದ್ದು ಅದನ್ನು ವಿದ್ಯಾರ್ಥಿಗಳು ಗೌರವ ಭಾವನೆಯಿಂದ ಅರ್ಥೈಸಿಕೊಳ್ಳಬೇಕು. ತಂದೆ ತಾಯಿ ಮಾತನ್ನು ಕೇಳುವ ವ್ಯವದಾನ ಬೆಳಸಿಕೊಳ್ಳಿ ಅವರಲ್ಲಿರುವ ಆದರ್ಶಗನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಐಷಾರಾಮಿ ಉದ್ಯೋಗ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಶ್ರಮದ ಬದುಕು, ಕೃಷಿ ಉದ್ಯೋಗ ಎಲ್ಲರಿಗೂ ಬೇಡವಾಗುತ್ತಿದೆ. ವಿದ್ಯಾರ್ಥಿ ಸಮಯ ಜೀವನಕ್ಕಟ್ಟಿಕೊಳ್ಳುವ ಘಟ್ಟವಾಗಿದೆ ದುಷ್ಚಟಗಳಿಗೆ ದಾಸರಾಗಬೇಡಿ, ಮೊಬೈಲ್ ಹಾವಳಿ ಹೆಚ್ಚಾಗುತ್ತಿದ್ದು ಅದರಿಂದ ದೂರವಿರಿ. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ. ಪರೀಕ್ಷೆಯಲ್ಲಿ ಸೋತರು ಜೀವನದಲ್ಲಿ ಸೋಲಬಾರದು ಸಾಧನೆಯಿಂದ ಮಾತ್ರ ಶಾಶ್ವತರಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಪ್ರಾಚಾರ್ಯ ಎಸ್‌.ಆರ್‌. ಮೂಗನೂರಮಠ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸಾಮರ್ಥ್ಯಗಳನ್ನು ವಿಕಸನಗೊಳಿಸುವ ಕೆಲಸವನ್ನು ಶಿಕ್ಷಣ ಮಾಡುತ್ತದೆ. ಗುರುವಿಗೆ ಮಹತ್ತರ ಸ್ಥಾನವಿದ್ದು ಅವನು ಕೇವಲ ಮಾರ್ಗದರ್ಶಿಯಲ್ಲ ವಿದ್ಯಾರ್ಥಿಗಳನ್ನು ಪ್ರಕಾಶಮಾನ ಮಾಡಲು ಶ್ರಮಿಸುತ್ತಾರೆ. ಪ್ರತಿಯೊಂದಕ್ಕು ದೈವತ್ವದ ಸ್ವರೂಪ ನೀಡುವ ಶಕ್ತಿ ಭಾರತೀಯ ಸಂಸ್ಕೃತಿಗೆ ಇದ್ದು ಅದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಿ. 80 ವರ್ಷ ಪೂರೈಸಿದ ನಮ್ಮ ಮಹಾವಿದ್ಯಾಲಯ ಗುರುಕುಲದಂತೆ ಶಿಕ್ಷಣ ನೀಡುತ್ತಿದೆ. ಗುರಿಯತ್ತ ಗೆಜ್ಜೆ ಹಾಕಲು ನಿರಂತರ ಅಧ್ಯಯನ ಅವಶ್ಯ. ನೀರೆರೆದರೆ ಮರ ನೆರಳು ನೀಡುವಂತೆ ವಿದ್ಯಾರ್ಥಿಗಳಿಗೆ ಜ್ಞಾನ ಎರೆದರೆ ದೇಶ ಆಸ್ತಿಯಾಗುತ್ತಾರೆ ಎಂದರು. 

ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ಕೆ.ವಿ ಮಠ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ತಾನಾಜಿ ವಿಭೂತಿ, ಗಾಯತ್ರಿ ರಾಠೋಡ ಸೇರಿದಂತೆ ವಿವಿದ ವಿಭಾಗಗಳ ಉಪನ್ಯಾಸಕರು ಪಾಲ್ಗೊಂಡಿದ್ದರು.