ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಡಾ. ಶಿಲಾಧರ ಜಾಧವ

ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಡಾ. ಶಿಲಾಧರ ಜಾಧವ  Cultivate a good personality alongside academic marks: Dr. Shiladhara Jadhav

ಲೋಕದರ್ಶನ ವರದಿ 

ಸಿಂದಗಿ 30: ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಊರು, ತಾಯಿ-ತಂದೆ ಹಾಗೂ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿಲಾಧರ ಎನ್‌. ಜಾಧವ ಹೇಳಿದರು.  

ಸಿಂದಗಿ ಪಟ್ಟಣದ  ಪ.ವಿ.ವಿ. ಸಂಸ್ಥೆಯ ಆರಿ​‍್ಡ. ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಠ್ಯಪೂರಕ ಚಟುವಟಿಕೆ, ರೋವರ್ಸ್‌ ಮತ್ತು ರೇಂಜರ್ಸ, ಭಾರತ ಸೇವಾದಳ, ಎನ್‌ಎಸ್‌ಎಸ್ ಘಟಕಗಳ ಉದ್ಘಾಟನೆ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ. ಉತ್ತಮ ವ್ಯಕ್ತಿತ್ವ, ಮಾನವೀಯತೆ, ಶಿಸ್ತು ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳುವುದು ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಈ ಮಹಾವಿದ್ಯಾಲಯವು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುವುದರ ಜೊತೆಗೆ ಸಂಸ್ಕಾರಯುತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ದೇಶದ ಹಲವು ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.  

ಕಾರ್ಯಕ್ರಮದಲ್ಲಿ ವಿಜಯಪುರದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ನರರೋಗ ತಜ್ಞ ಡಾ. ವಿರೂಪಾಕ್ಷಪ್ಪ ಬಿರಾದಾರ ಮಾತನಾಡಿ, “ನನ್ನ ಜೀವನದಲ್ಲಿ ನನ್ನ ತಂದೆಯೇ ನನ್ನ ಹೀರೋ ಮತ್ತು ಆದರ್ಶ. ಒಂದು ಕುಟುಂಬದಲ್ಲಿ ಒಬ್ಬರು ಉತ್ತಮ ಶಿಕ್ಷಣ ಪಡೆದರೆ ಆ ಕುಟುಂಬದ ಭವಿಷ್ಯವೇ ಬದಲಾಗುತ್ತದೆ. ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಶಿಕ್ಷಣದಿಂದ ಸುಧಾರಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ತಂದೆ-ತಾಯಿಯ ಕಷ್ಟವನ್ನು ಅರಿತು ಶ್ರದ್ಧೆಯಿಂದ ಓದಿ ಅವರ ಕನಸುಗಳನ್ನು ನನಸು ಮಾಡಬೇಕು” ಎಂದು ಹೇಳಿದರು.  

ಸಮಾರಂಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ.ಎಂ. ಸಿಂಗನಳ್ಳಿ ವಹಿಸಿದ್ದರು. ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಉಪಪ್ರಾಚಾರ್ಯರಾದ ಪಿ.ವಿ. ಮಹಾಲಿಂಗಮಠ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.