ನಾಗರಿಕರ ಸಹಕಾರದಿಂದ ಅಪರಾಧ ತಡೆ ಸಾಧ್ಯ: ಸಿಪಿಐ ಮಹಾಂತೇಶ್

ನಾಗರಿಕರ ಸಹಕಾರದಿಂದ ಅಪರಾಧ ತಡೆ ಸಾಧ್ಯ: ಸಿಪಿಐ ಮಹಾಂತೇಶ್  Crime prevention is possible with citizens' cooperation: CPI Mahantesh


ಬಳ್ಳಾರಿ, ಆ. 23: ಪೊಲೀಸರ ಕಾರ್ಯವೈಖರಿ ಹಾಗೂ ಸಿನಿಮಾ ಶೈಲಿಯ ಪೊಲೀಸ್ ಕಾರ್ಯವೈಖರಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸಿನಿಮಾದಂತೆ ತಕ್ಷಣ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಸಮಾಜ ಸುಧಾರಣೆಯಲ್ಲಿ ಪೊಲೀಸರ ಜೊತೆಗೆ ನಾಗರಿಕರ ಸಹಕಾರವೂ ಅಗತ್ಯ ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಹೇಳಿದರು.  

ಸಮಾಜ ಚಿಂತಕರ ಚಾವಡಿ ವತಿಯಿಂದ ಪೊಲೀಸ್ ಜಿಮ್ಖಾನಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಶಾಮುಕ್ತ ಸಮಾಜ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದೇಹದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ ಎಂದು ಎಚ್ಚರಿಸಿದರು.  

ಯುವಜನರು ಯಾವುದೇ ರೀತಿಯ ನಶೆಗೆ ಬಲಿಯಾಗಬಾರದು. ಗಾಂಜಾದಲ್ಲಿ ಸಿಂಥೆಟಿಕ್, ಸೆಮಿ-ಸಿಂಥೆಟಿಕ್ ಹಾಗೂ ನೈಸರ್ಗಿಕವಾಗಿ ದೊರೆಯುವ ಮೂರು ವಿಧಗಳಿವೆ. ಆರಂಭದಲ್ಲಿ ಮೋಜಿಗಾಗಿ ಸೇವಿಸುವವರು ಕ್ರಮೇಣ ಮಾದಕ ವಸ್ತುಗಳ ದಾಸರಾಗುವ ಸಾಧ್ಯತೆ ಇದೆ. ಈ ಜಾಲದಿಂದ ಹೊರಬರಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.  

ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಮಬ್ರಹ್ಮ ಮಾತನಾಡಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾದರೆ ಜಾಮೀನು ಪಡೆಯುವುದು ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಕರು ಗಾಂಜಾ ಮತ್ತು ಇತರ ಮಾದಕ ವಸ್ತುಗಳಿಂದ ದೂರವಿದ್ದು, ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು.  

ವೈದ್ಯೆ ನಂದಿನಿ ಮಾತನಾಡಿ, ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಯಕೃತ್ತು, ಮೆದುಳು, ಹೃದಯ ಮತ್ತು ಮೂತ್ರಪಿಂಡ ಸೇರಿದಂತೆ ದೇಹದ ಹಲವು ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ತಮ್ಮ ಸುತ್ತಮುತ್ತ ಇಂತಹ ವಸ್ತುಗಳ ಬಳಕೆ ಕಂಡುಬಂದರೆ ಪೊಲೀಸರ ಗಮನಕ್ಕೆ ತಂದು, ಅಗತ್ಯವಿರುವವರನ್ನು ರಕ್ಷಿಸಲು ಸಹಕರಿಸಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಯ್ಯ ನಾಯ್ಡು ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ. ಯುವಜನತೆ ಮಾದಕ ವಸ್ತುಗಳ ದುಷ್ಪರಿಣಾಮಕ್ಕೆ ಬಲಿಯಾಗದೆ, ಶಿಕ್ಷಣದತ್ತ ಗಮನಹರಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಭು, ಪ್ರವೀಣ್ ಕುಮಾರ್, ಗಣೇಶ್, ಪ್ರಾಪರ್ಟಿ ಅಶೋಕ್ ಚೌಹಾಣ್, ಅನಿತಾ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿರೂಪಾಕ್ಷಯ್ಯ ಹಿರೇಮಠ ನೆರವೇರಿಸಿದರು. ಸುಷ್ಮಾ ಪ್ರಾರ್ಥಿಸಿದರು.