ಕೋವಿಡ್; ಕಳೆದೊಂದು ದಿನದಲ್ಲಿ ಬರೋಬ್ಬರಿ 20,000 ಪ್ರಕರಣ; ಸೋಂಕಿತರ ಸಂಖ್ಯೆ 5.28 ಲಕ್ಷಕ್ಕೇರಿಕೆ

ನವದೆಹಲಿ,  ಜೂ 28 : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರ ಕೊರೋನಾ ಪ್ರಕರಣಗಳು  ವರದಿಯಾಗಿವೆ. ಇದು ಇದುವರೆಗೆ ದಾಖಲಾದ ಅತಿ ಹೆಚ್ಚಿನ ಒಂದು ದಿನದ ಪ್ರಕರಣಗಳಾಗಿದ್ದು,  ಒಟ್ಟು ಸೋಂಕಿತರ ಸಂಖ್ಯೆ 5.28 ಲಕ್ಷಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದೆ. ಕಳೆದೊಂದು ದಿನದಲ್ಲಿ 410 ಮಂದಿ ಮೃತಪಟ್ಟಿದ್ದು, ಒಟ್ಟು ಸೋಂಕಿಗೆ ಬಲಿಯಾದವರ ಸಂಖ್ಯೆ 16,095ಕ್ಕೇರಿಕೆಯಾಗಿದೆ. ಈ ನಡುವೆ, 3.09 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದು, 2.03 ಲಕ್ಷ ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ವ್ಯತ್ಯಾಸ 1.06 ಲಕ್ಷದಷ್ಟಿದೆ. ಸದ್ಯ ಚೇತರಿಕೆಯ ಪ್ರಮಾಣ ಶೇ. 58.56ರಷ್ಟಿದೆ. ಕಳೆದೊಂದು ವಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಹೆಚ್ಚಳದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಭಾಗಶಃ ಲಾಕ್‌ಡೌನ್‌ ಘೋಷಿಸಿವೆ.ಐಸಿಎಂಆರ್ ದತ್ತಾಂಶದ ಪ್ರಕಾರ, ಇಲ್ಲಿಯವರೆಗೆ ದೇಶದಲ್ಲಿ 82.27 ಲಕ್ಷ ಜನರ ತಪಾಸಣೆ ನಡೆಸಲಾಗಿದೆ.