ಕೊಲ್ಕತ್ತಾ, ಏ ೧೬,ಆಲ್ಕೋಹಾಲ್ ಸೇವನೆಯಿಂದ ಕೋವಿಡ್ -೧೯ ಸೋಂಕಿನಿಂದ ರಕ್ಷಣೆ ಲಭಿಸುವುದಿಲ್ಲ ಎಂದು ಜನರಿಗೆ ತಿಳುವಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಮದ್ಯ ಬಳಕೆಯನ್ನು ನಿರ್ಬಂಧಗೊಳಿಸುವ ಕಠಿಣ ಕ್ರಮಗಳ ಜಾರಿಯನ್ನು ಸರ್ಕಾರಗಳು ಉತ್ತೇಜಿಸಬೇಕು ಎಂದು ಹೇಳಿದೆ.ಅಲ್ಕೋಹಾಲ್ ಸಾಮಾನ್ಯವಾಗಿ ಮಾನವನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಅಂಶವಾಗಿದ್ದು, ಅದರಲ್ಲೂ ಕೋವಿಡ್ -೧೯ ಸೋಂಕು ಸಮಯದಲ್ಲಿ, ಆಲ್ಕೊಹಾಲ್ ಸೇವನೆ ಆರೋಗ್ಯವನ್ನು ಮತ್ತಷ್ಟು ದುರ್ಬಲಗೊಳಿಸಿ ಅಪಾಯಗಳಿಗೆ ಸಿಲುಕಿಸಲಿದೆ ಎಂದು ತಿಳಿಸಿದೆ.
ಭಾರಿ ಪ್ರಮಾಣದ ಅಲ್ಕೋಹಾಲ್ ಸೇವನೆಯಿಂದ ಕೋವಿಡ್ -೧೯ ವೈರಸ್ ಅನ್ನು ಕೊಲ್ಲಬಹುದು ಎಂಬ ತಪ್ಪು ಮಾಹಿತಿ ಜನರಲ್ಲಿ ಹರಡಲಾಗುತ್ತಿದೆ. ಇದೊಂದು ಅಪಾಯಕಾರಿ ಮಿಥ್ಯೆಯಾಗಿದ್ದು, ಮದ್ಯ ಸೇವನೆಯಿಂದ ಕೋವಿಡ್ -೧೯ ಸೋಂಕು ನಿಗ್ರಹ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಯಾವುದೇ ರೀತಿಯ ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಅಪಾಯವಿದೆ, ಆದರೆ ಹೆಚ್ಚಿನ ಸಾಮರ್ಥ್ಯದ ಈಥೈಲ್ ಆಲ್ಕೋಹಾಲ್ (ಎಥೆನಾಲ್) ಅನ್ನು ಸೇವಿಸುವುದರಿಂದ, ಸಾವು ಸೇರಿ ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. ವಿಶ್ವದಾದ್ಯಂತ ವರ್ಷಕ್ಕೆ ೩ ಮಿಲಿಯನ್ ಜನರ ಸಾವಿಗೆ ಆಲ್ಕೊಹಾಲ್ ಕಾರಣವಾಗಿದ್ದು ಕೋವಿಡ್ -೧೯ ಸಾಂಕ್ರಾಮಿಕ ಮತ್ತು ತುರ್ತು ಸಂದರ್ಭಗಳಲ್ಲಿ ಆರೋಗ್ಯವನ್ನು ರಕ್ಷಿಸಲು ಹಾಗೂ ಆಲ್ಕೊಹಾಲ್ ಸೇವನೆಯಿಂದ ಉಂಟಾಗುವ ಹಾನಿ ತಗ್ಗಿಸಲು ಹಾಲಿ ಇರುವ ನಿರ್ಬಂಧ ನಿಯಮಗಳನ್ನು ಬಲಪಡಿಸಬೇಕು; ಯಾವುದೇ ನಿಯಮಗಳ ಸಡಿಲಿಕೆ ಅಥವಾ ಅವುಗಳ ಜಾರಿ ತಪ್ಪಿಸಬೇಕು ಎಂದು ಸಲಹೆ ನೀಡಿದೆ.