ಬೆಂಗಳೂರು, ನ.15 : ಸಾಲದ ಸಮಸ್ಯೆಯಿಂದ ದಂಪತಿ ಶೌಚಾಲಯ ಸ್ವಚ್ಛಗೊಳಿಸುವ ಬ್ಲಿಚಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಮಂಜುನಾಥ ನಗರದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ವಾಸಿಸುತ್ತಿದ್ದ ಮೋಹನ್ (62) ಹಾಗೂ ಅವರ ಪತ್ನಿ ನಿರ್ಮಲಾ (50) ಆತ್ಮಹತ್ಯೆಗೆ ಶರಣಾದ ದಂಪತಿ.
ಬೆಮೆಲ್ನ ನಿವೃತ್ತ ನೌಕರರಾಗಿದ್ದ ಮೋಹನ್ ಮಂಜುನಾಥ ನಗರದಲ್ಲಿ ಎರಡು ಮನೆ ಕಟ್ಟಿದ್ದರು. ಒಂದು ಮನೆಯಲ್ಲಿ ಮೋಹನ್ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದರೆ, ಮತ್ತೊಂದು ಮನೆಯಲ್ಲಿ ಮಗ ಹಾಗೂ ಸೊಸೆ ನೆಲೆಸಿದ್ದರು.
ನಿವೃತ್ತ ಜೀವನ ನಡೆಸುತ್ತಿದ್ದ ಮೋಹನ್, ಹಣಕಾಸಿನ ತೊಂದರೆಗೆ ಸಿಲುಕಿದ್ದರು. ಇದೇ ವಿಷಯದಲ್ಲಿ ಕೌಟುಂಬಿಕ ಕಲಹ ಉಂಟಾಗಿದೆ. ಇದರಿಂದ ನೊಂದ ಅವರು ಕಳೆದ ರಾತ್ರಿ ಪತ್ನಿ ನಿರ್ಮಲಾ ಜತೆ ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ಕುಡಿದಿದ್ದಾರೆ. ರಕ್ತ ಕಾರಿಕೊಂಡು ಅಸ್ವಸ್ಥರಾಗಿ ಇಬ್ಬರು ಮೃತಪಟ್ಟಿದ್ದು, ಬೆಳಿಗ್ಗೆ ಮಗ ಬಾಗಿಲು ಬಡಿದಿದ್ದು, ಎಷ್ಟು ಬಾರಿ ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಮುನ್ನ ಮೋಹನ್ ಡೆತ್ನೋಟ್ ಬರೆದಿದ್ದು, ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಪುತ್ರ ಹಾಗೂ ಸೊಸೆಯ ಹೇಳಿಕೆಯನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.